Advertisement

ಬಹು ಪತ್ನಿತ್ವ , ನಿಕಾಹ್‌ ಹಲಾಲ್‌ಗೆ ಕೊಕ್‌?

06:00 AM Mar 27, 2018 | |

ಹೊಸದಿಲ್ಲಿ: ಒಂದೇ ಬಾರಿಗೆ ತ್ರಿವಳಿ ತಲಾಖ್‌ ನೀಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ನಿಷೇಧ ಹೇರಿದ ಅನಂತರದಲ್ಲಿ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿಮರಲ್ಲಿ ಚಾಲ್ತಿಯಲ್ಲಿರುವ ಬಹು ಪತ್ನಿತ್ವ ಹಾಗೂ ನಿಕಾಹ್‌ ಹಲಾಲ್‌ ಪದ್ಧತಿಗಳ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿದೆ. ಈ ಸಂಬಂಧ ಕೇಂದ್ರ ಸರಕಾರ ಹಾಗೂ ಕಾನೂನು ಆಯೋಗದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಕೇಳಿದೆ.

Advertisement

ಕಳೆದ ವರ್ಷ ಸ್ಥಾಪಿಸಲಾದ ಐವರು ನ್ಯಾಯಮೂರ್ತಿಗಳ ಪೀಠವು ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ತೀರ್ಪು ನೀಡಿತ್ತು. ಇದಾದ ಬಳಿಕ ಬಹುಪತ್ನಿತ್ವ ಹಾಗೂ ನಿಕಾಹ್‌ ಹಲಾಲ್‌ ಪದ್ಧತಿಯ ಸಾಂವಿಧಾನಿಕ ಅರ್ಹತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯಮೂರ್ತಿ ಗಳಾದ ಎ. ಎಂ. ಖಾನ್ವಿಲ್ಕರ್‌ ಹಾಗೂ ಡಿ. ವೈ. ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದ್ದು, ಕಳೆದ ವರ್ಷ ಇದೇ ಪೀಠ ತ್ರಿವಳಿ ತಲಾಖ್‌ ಅನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿತ್ತು. ಸದ್ಯ ಬಹು ಪತ್ನಿತ್ವ, ನಿಕಾಹ್‌ ಹಲಾಲ್‌ ನಿಯಮ ಅಸಾಂವಿಧಾನಿಕ ಎಂದು ವಾದಿಸಿ ಮೂರು ದಾವೆಗಳು ನ್ಯಾಯಪೀಠದಲ್ಲಿವೆ.

ಅರ್ಜಿದಾರರ ವಾದವೇನು?: ದಿಲ್ಲಿ ಬಿಜೆಪಿ ಮುಖಂಡ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ ಕೂಡ ದೂರು ಸಲ್ಲಿಸಿದ್ದು, ಇದು ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯಲು ಸದ್ಯದ ಅಗತ್ಯವಾಗಿದೆ ಎಂದಿದ್ದಾರೆ. ತ್ರಿವಳಿ ತಲಾಖ್‌, ಬಹು ಪತ್ನಿತ್ವ ಮತ್ತು ನಿಕಾಹ್‌ ಹಲಾಲ್‌ ಆಚರಣೆಗಳನ್ನು ಮುಂದುವರಿಸುವುದು ಸಂವಿಧಾನದ ಕಲಂ 14, 15 ಮತ್ತು 21ರ ಉಲ್ಲಂಘನೆ ಯಾಗಿದೆ ಎಂದು ಅವರು ಹೇಳಿದ್ದಾರೆ.

ತ್ರಿವಳಿ ತಲಾಖ್‌ ವಿಷಯ  ಸಂಬಂಧ ತೀರ್ಪು ನೀಡುವ ವೇಳೆ, ಕೇವಲ ತ್ರಿವಳಿ ತಲಾಖ್‌ಗೆ ನಿಷೇಧ ಹೇರುತ್ತಿದ್ದೇವೆ. ಉಳಿದ ಪದ್ಧತಿಗಳನ್ನು ಈ ವ್ಯಾಪ್ತಿಗೆ ಒಳಪಡಿಸಿಲ್ಲ ಎಂದು ನ್ಯಾಯಮೂರ್ತಿ ಖೇಹರ್‌ ಹೇಳಿದ್ದರು. 

ಏನಿದು ಬಹುಪತ್ನಿತ್ವ ಮತ್ತು ನಿಕಾಹ್‌ ಹಲಾಲ್‌?
ಬಹುಪತ್ನಿತ್ವ ಎಂದರೆ ಮುಸ್ಲಿಮ್‌ ಪುರುಷರಿಗೆ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ವಿವಾಹವಾಗುವ ಅವಕಾಶವಾಗಿದೆ. ಅಂದರೆ, 4 ಮದುವೆಯಾಗಲು ಮುಸ್ಲಿಮ್‌ ಗಂಡಸರಿಗೆ ಅವಕಾಶವಿದೆ. ಇನ್ನೊಂದೆಡೆ ನಿಕಾಹ್‌ ಹಲಾಲ್‌ ಎಂದರೆ ಮಹಿಳೆಯು ತನ್ನ ವಿಚ್ಛೇದಿತ ಪತಿ¿ೊಂದಿಗೆ ಪುನಃ ವಿವಾಹವಾಗಬೇಕಾದರೆ ಇನ್ನೊಬ್ಬ ವ್ಯಕ್ತಿಯನ್ನು ವಿವಾಹವಾಗಿ, ಆತನಿಂದ ವಿಚ್ಛೇದನ ಪಡೆಯಲೇಬೇಕು ಎಂಬ ನಿಯಮ. ಇದು ಮುಸ್ಲಿಮ್‌ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಎನ್ನುವುದು ಅರ್ಜಿದಾರರ ವಾದ. ಅಲ್ಲದೆ ದೂರಿನಲ್ಲಿ ನಿಕಾಹ್‌ ಮುತಾಹ್‌ ಮತ್ತು ನಿಕಾಹ್‌ ಮಿಸ್ಯಾರ್‌ ಎಂಬ ಪದ್ಧತಿಗೂ ವಿರೋಧ ವ್ಯಕ್ತಪಡಿಸಲಾಗಿದೆ. ಈ ಪದ್ಧತಿಗಳ ಅನುಸಾರವಾಗಿ ಪೂರ್ವ ನಿಗದಿತ ಅವಧಿಗೆ ವಿವಾಹವನ್ನು  ಮಾಡಿಕೊಳ್ಳಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next