Advertisement
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ರಂಜನ್ ಗೊಗೋಯ್ ಮತ್ತು ನ್ಯಾ. ನವೀನ್ ಸಿನ್ಹಾ ಅವರಿದ್ದ ನ್ಯಾಯಪೀಠ, “ಇ-ಟೆಂಡರ್ ರದ್ದು ಕೋರಿ ಎಫ್ ಐಎಂಐ ಸಲ್ಲಿಸಿದ್ದ ಅರ್ಜಿ ಹಾಗೂ ವೇದಾಂತ ಸಂಸ್ಥೆ ನೀಡಿದ್ದ ಇ-ಟೆಂಡರ್‌ಗೆ ಪರ್ಯಾಯ ವಿಧಾನಗಳನ್ನು ಅನುಸರಿಸುವ ಸಲಹೆಯನ್ನು ನ್ಯಾಯಪೀಠತಿರಸ್ಕರಿಸಿದೆ,’ ಎಂದು ತೀರ್ಪು ನೀಡಿದೆ. ಕೇಂದ್ರ ಅಧಿಕಾರ ಸಮಿತಿ 2017ರ ಏಪ್ರಿಲ್ ನಲ್ಲಿ ನೀಡಿದ ವರದಿ ಆಧರಿಸಿ, ಇ-ಟೆಂಡರ್‌ಗೆ ಬದಲಾಗಿ ಉತ್ಪಾದಕರು ಹಾಗೂ ಖರೀದಿದಾರರ ನಡುವೆ ದೀರ್ಘ ಕಾಲಿಕ ಒಪ್ಪಂದ ಏರ್ಪಡಿಸಿ ವ್ಯವಹರಿಸಲು ಅವಕಾಶ ಕಲ್ಪಿಸುವಂತೆ ಎಫ್ ಐಎಂಐ ಕೋರಿತ್ತು. ಆದರೆ, ಇದಕ್ಕೆ ವಿರುದ್ಧವಾಗಿ ವಾದ ಮಂಡಿಸಿದ್ದ ಎನ್‌ಜಿಒ ಸಮಾಜ ಪರಿವರ್ತನಾ ಸಮುದಾಯ, “ಇ-ಹರಾಜು ನಡೆದರೆ ಒಳ್ಳೆಯ ದರ ಮತ್ತು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ರಾಯಧನ ಸಿಗುತ್ತದೆ’ ಎಂದು ಹೇಳಿತ್ತು.
“ಭಯಾನಕ’ ಅನುಭವ ನಮ್ಮ ಮುಂದಿರುವಾಗ ಇ-ಹರಾಜು ರದ್ದು ಮಾಡಬೇಕೆಂಬ ಮನವಿಯನ್ನು ಒಪ್ಪಲು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ಇದೇ ಕಾರಣಕ್ಕಾಗಿ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಮತ್ತು ಕರ್ನಾಟಕ ರಾಜ್ಯದ ಅಫಿಡವಿಟ್‌ನಲ್ಲಿನ ಸಲಹೆಗಳನ್ನೂ ಒಪ್ಪುತ್ತಿಲ್ಲ,’ ಎಂದಿತು. “ಅತ್ಯುತ್ತಮ ದರ ದೊರೆಯಲಿ ಎಂಬ ಉದ್ದೇಶದಿಂದ ಇ-ಹರಾಜು ಪ್ರಕ್ರಿಯೆ ನಡೆಸಲೇಬೇಕು,’ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠ, ರಾಜ್ಯದ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿ 2013ರ ಏಪ್ರಿಲ್ 18ರಂದು ಆದೇಶಿಸಿತ್ತು. ಆದರೆ ವರ್ಷಕ್ಕೆ 3 ಕೋಟಿ ಟನ್ (30 ಮಿಲಿಯನ್) ಅದಿರನ್ನು ಮಾತ್ರ ತೆಗೆಯಬೇಕು ಎಂದು ನಿರ್ಬಂಧ ವಿಧಿಸಿತ್ತು.