ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿನ ಶೋಪಿಯಾನ್ ನಲ್ಲಿ ಸೇನಾ ಸಿಬಂದಿ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಮತ್ತು ಜಮ್ಮು ಕಾಶ್ಮೀರ ರಾಜ್ಯ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಸೇನಾ ಮೇಜರ್ ಆದಿತ್ಯ ಕುಮಾರ್ ಅವರ ತಂದೆ ಲೆ| ಕ| ಕರಂವೀರ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್, ಎಫ್ಐಆರ್ ಗೆ ತಡೆಯಾಜ್ಞೆ ನೀಡಿತು.
ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಫೈರಿಂಗ್ ನಡೆಸಿದ ಸೈನಿಕರಲ್ಲಿ ಓರ್ವನಾಗಿರುವ ತನ್ನ ಪುತ್ರ ಯೋಧನ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಲೆ|ಕ| ಕರಂವೀರ್ ಸಿಂಗ್ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು. ಎರಡು ವಾರಗಳ ಒಳಗೆ ತನ್ನ ನೊಟೀಸಿಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ಜಮ್ಮು ಕಾಶ್ಮೀರ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಮೇಜರ್ ಆದಿತ್ಯ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ಕೈಗೊಳ್ಳಕೂಡದು ಎಂದು ನಿರ್ದೇಶಿಸಿರುವ ಸುಪ್ರೀಂ ಕೋರ್ಟ್, ಕರಂವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯ ಪ್ರತಿಗಳನ್ನು ಅಟಾರ್ನಿ ಜನರಲ್ ಮತ್ತು ಜಮ್ಮು ಕಾಶ್ಮೀರ ಸರಕಾರದ ವಕೀಲರಿಗೆ ತಲುಪಿಸುವಂತೆ ಸೂಚಿಸಿತು.
10 ಗಢವಾಲ್ ರೈಫಲ್ಸ್‌ನಲ್ಲಿ ಮೇಜರ್ ಆಗಿರುವ ತನ್ನ ಪುತ್ರನ ವಿರುದ್ಧ ತಪ್ಪಾಗಿ ಮತ್ತು ಸ್ವೇಚ್ಚಾಚಾರದ ಕ್ರಮವಾಗಿ ಎಫ್ಐಆರ್ ದಾಖಲಿಸಲಾಗಿದೆ. ಸೇನೆಯ ಮೇಲೆ ಕಲ್ಲೆಸೆಯುವವರ ವಿರುದ್ಧ ಆತ್ಮರಕ್ಷಣೆಗಾಗಿ ಸೈನಿಕರು ಫೈರಿಂಗ್ ನಡೆಸಿದ್ದಾರೆ ಎಂದು ಕರಂವೀರ್ ಸಿಂಗ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.