ಹೊಸದಿಲ್ಲಿ/ಬೆಂಗಳೂರು: ಇತ್ತೀಚೆಗಿನ ನ್ಯಾಯಾಲಯದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ (Karnataka High Court) ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ (Justice Vedavyasachar Srishananda) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ (ಸೆ.20) ಕರ್ನಾಟಕ ಹೈಕೋರ್ಟ್ ನಿಂದ ವರದಿ ಕೇಳಿದೆ.
ಜಸ್ಟಿಸ್ ಶ್ರೀಶಾನಂದ ಅವರು ಭೂಮಾಲೀಕ-ಬಾಡಿಗೆದಾರರ ವಿವಾದವನ್ನು ಉದ್ದೇಶಿಸಿ, ಬೆಂಗಳೂರಿನಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶವನ್ನು “ಪಾಕಿಸ್ತಾನ” ಎಂದು ಉಲ್ಲೇಖಿಸಿದ್ದರು.
ಸಿಜೆಐ ಡಿವೈ ಚಂದ್ರಚೂಡ್, ಜ.ಎಸ್.ಖನ್ನ, ಬಿ.ಆರ್.ಗವಾಯಿ, ಎಸ್.ಕಾಂತ್ ಮತ್ತು ಎಚ್.ರಾಯ್ ಅವರಿದ್ದ ಪಂಚ ಸದಸ್ಯರ ಪೀಠವು, ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಸ್ಥಾಪಿಸುವ ಅಗತ್ಯವನ್ನು ವ್ಯಕ್ತಪಡಿಸಿದರು.
ನ್ಯಾಯಾಲಯದ ಕಲಾಪಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಸಾಮಾಜಿಕ ಮಾಧ್ಯಮವು ಸಕ್ರಿಯ ಪಾತ್ರವನ್ನು ವಹಿಸಿದಾಗ, ನ್ಯಾಯಾಂಗ ವ್ಯಾಖ್ಯಾನವು ನ್ಯಾಯಾಲಯದಿಂದ ನಿರೀಕ್ಷಿತ ಸಭ್ಯತೆಯೊಂದಿಗೆ ಹೊಂದಾಣಿಕೆ ಯಾಗುವುದನ್ನು ಖಚಿತಪಡಿಸಿಕೊಳ್ಳುವುದು ತುರ್ತು ಅಗತ್ಯ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
“ನ್ಯಾಯಾಲಯದ ಕಲಾಪದಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಗಳು ಮಾಡಿದ ಕಾಮೆಂಟ್ ಗಳಿಗೆ ಮಾಧ್ಯಮ ವರದಿಗಳ ಬಗ್ಗೆ ಗಮನ ಸೆಳೆಯಲಾಗಿದೆ. ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಂದ ಸೂಚನೆಗಳನ್ನು ಪಡೆದ ನಂತರ ವರದಿಯನ್ನು ಸಲ್ಲಿಸುವಂತೆ ನಾವು ಕರ್ನಾಟಕ ಹೈಕೋರ್ಟ್‌ಗೆ ವಿನಂತಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ನಾವು ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ಹಾಕಬಹುದು” ಎಂದರು.
ಎರಡು ದಿನಗಳಲ್ಲಿ ವರದಿ ಸಲ್ಲಿಸಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಆದೇಶಿಸಿದರು. ಈ ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ಬುಧವಾರಕ್ಕೆ ನಿಗದಿಪಡಿಸಲಾಗಿದೆ.