ಪಣಜಿ: ಆಯೋಗ ನೀಡಿರುವ ಡಿಪಿಆರ್ ಅನುಮೋದನೆಯನ್ನು ಹಿಂಪಡೆಯುವಂತೆ ಹಾಗೂ ಕೂಡಲೇ ಜಲ ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದ್ದು,”ಅಗತ್ಯ ಪರವಾನಿಗೆ ಪಡೆಯದೆ ಕರ್ನಾಟಕ ಕಳಸಾ-ಬಂಡೂರಿ ಕಾಮಗಾರಿ ಆರಂಭಿಸಬಾರದು ಹಾಗೂ ಜಲ ಆಯೋಗವು ಡಿಪಿಆರ್ ಪ್ರತಿಯನ್ನು ಗೋವಾ ಸರ್ಕಾರಕ್ಕೆ ಸಲ್ಲಿಸಬೇಕು” ಎಂದು ತೀರ್ಪು ನೀಡಿದೆ.
ಕರ್ನಾಟಕಕ್ಕೆ ಕಳುಹಿಸಿದ ಶೋಕಾಸ್ ನೋಟಿಸ್ ಕುರಿತು ತೀರ್ಮಾನಿಸುವಂತೆ ಗೋವಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ.
ಏತನ್ಮಧ್ಯೆ, ಮಹದಾಯಿ ವಿವಾದದ ಅಂತಿಮ ವಿಚಾರಣೆಯನ್ನು ಈಗ ಜುಲೈ 2023 ರಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ನಡೆಸಲಾಗುವುದು ಎಂದು ಗೋವಾದ ಅಡ್ವೊಕೇಟ್ ಜನರಲ್ ಡೇವಿಡ್ ಪಾಂಗಮ್ ಹೇಳಿದ್ದಾರೆ.
ಈ ಕುರಿತು ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ “ಎಲ್ಲಾ ಶಾಸನಬದ್ಧ ಅನುಮತಿಗಳಿಗೆ ಮಹದಾಯಿ ನ್ಯಾಯಾಲಯದ ತೀರ್ಪಿನ ನಿರ್ದೇಶನಗಳು ಜಾರಿಯಲ್ಲಿರುತ್ತವೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ” ಎಂದು ಸಾವಂತ್ ಹೇಳಿದರು.
“ನ್ಯಾಯಾಲಯವು ಮಾರ್ಚ್ 2, 2020 ರ ಹಿಂದಿನ ಆದೇಶವನ್ನು ಉಲ್ಲೇಖಿಸಿದೆ, ಅದು ಅದೇ ರೀತಿ ಹೇಳುತ್ತದೆ. ಈ ಆದೇಶವು ಗೋವಾ ಮತ್ತು ನಮ್ಮ ಮಹದಾಯಿ ಹಿತವನ್ನು ರಕ್ಷಿಸುವ ಮತ್ತೊಂದು ಹೆಜ್ಜೆಯಾಗಿದೆ” ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.