ಹೊಸದಿಲ್ಲಿ : ಪತಿಯ ತಿಂಗಳ ನಿವ್ವಳ ಸಂಬಳದ ಶೇ.25ರಷ್ಟನ್ನು ಪರಿತ್ಯಕ್ತ ಪತ್ನಿಗೆ ಜೀವನಾಂಶವಾಗಿ ನೀಡುವುದು ನ್ಯಾಯೋಚಿತ ಹಾಗೂ ಪರ್ಯಾಪ್ತ ಎನಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪತಿಗೆ ವಿಚ್ಛೇದನ ನೀಡಿದ ಬಳಿಕ ಪರಿತ್ಯಕ್ತ ಮಹಿಳೆಯು ಸಮಾಜದಲ್ಲಿ ಘನತೆ -ಗೌರವದಿಂದ ಬಾಳಲು ಪರ್ಯಾಪ್ತ ಎನಿಸುವಷ್ಟು ಪ್ರಮಾಣದ ಜೀವನಾಂಶವನ್ನು ಆಕೆಗೆ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಗಂಡನ ತಿಂಗಳ ನಿವ್ವಳ ಸಂಬಳದ ಶೇ.25ರಷ್ಟನ್ನು ಆತನ ಪರಿತ್ಯಕ್ತ ಪತ್ನಿಗೆ ಜೀವನಾಂಶವಾಗಿ ನೀಡುವುದು ನ್ಯಾಯೋಚಿತವೂ ಪರ್ಯಾಪ್ತವಾದದ್ದೂ ಆಗಿರುತ್ತದೆ. ಪರಿತ್ಯಕ್ತ ಪತ್ನಿಗೆ ನೀಡುವ ಶಾಶ್ವತ ಜೀವನಾಂಶವು ಉಭಯತರ ಸ್ಥಾನಮಾನಕ್ಕೆ, ಘನತೆ-ಗೌರವಕ್ಕೆ ತಕ್ಕುದಾಗಿರಬೇಕು ಮಾತ್ರವಲ್ಲದೆ ಇದು ಸನ್ನಿವೇಶ – ಪರಿಸ್ಥಿತಿಗೆ ಅನುಗುಣವಾಗಿರಬೇಕು. ಅನೇಕ ವಿಷಯಗಳನ್ನು ಪರಿಗಣಿಸಿ ಕೋರ್ಟ್ ದೊರಕಿಸಿಕೊಡುವ ಜೀವನಾಂಶವು ಸಮರ್ಥನೀಯವಾಗಿರಬೇಕು ಎಂದು ಜಸ್ಟಿಸ್ ಆರ್ ಭಾನುಮತಿ ಮತ್ತು ಎಂ ಎಂ ಶಾಂತನಗೌಡರ್ ಅವರನ್ನು ಒಳಗೊಂಡ ಪೀಠಡವು ನೀಡಿದ ತೀರ್ಪನ್ನು ಉಲ್ಲೇಖೀಸಿ ಟೈಮ್ಸ್ ಆಫ್ ಇಂಡಿಯಾ ವರದಿಮಾಡಿದೆ.
ಹಾಗಿದ್ದರೂ ಪರಿತ್ಯಕ್ತ ಪತ್ನಿಗೆ ಗಂಡನಿಂದ ಜೀವನಾಂಶವನ್ನು ಕೊಡಿಸುವಾಗ ಆಕೆಯ ಮಾಜಿ ಪತಿಗೆ ತನ್ನ ಹೊಸ ಕುಟುಂಬವನ್ನು ನಿಭಾಯಿಸುವುದಕ್ಕೆ ಅವಶ್ಯವಿರುವಷ್ಟು ಆರ್ಥಿಕ ಶಕ್ತಿ ಇರುವುದನ್ನು ಖಾತರಿಪಡಿಸಿಕೊಳ್ಳಬೇಕಾಗುತ್ತದೆ ಎಂದು ಕೋರ್ಟ್ ಹೇಳಿತು.
ಪಶ್ಚಿಮ ಬಂಗಾಲದ ಹೂಗ್ಲಿ ಎಂಬಲ್ಲಿನ ನಿವಾಸಿಯೋರ್ವರು ತಿಂಗಳಿಗೆ 95,527 ರೂ. ವೇತನ ಪಡೆಯುತ್ತಿದ್ದು ಆತನು ತನ್ನ ಪರಿತ್ಯಕ್ತ ಪತ್ನಿ ಹಾಗೂ ತನ್ನ ಪುತ್ರನಿಗೆ ತಿಂಗಳಿಗೆ 2,0,000 ರೂ. ಜೀವನಾಂಶ ಕೊಡಬೇಕೆಂದು ಕೋರ್ಟ್ ಹೇಳಿತು. ಇದಕ್ಕೆ ಮೊದಲು ಕಲ್ಕತ್ತಾ ಹೈಕೋರ್ಟ್ ತಿಂಗಳಿಗೆ 23,000 ರೂ.ಗಳ ಜೀವನಾಂಶವನ್ನು ಪ್ರಕಟಿಸಿತ್ತು.
“ಹೈಕೋರ್ಟ್ ಜೀವನಾಂಶ ಮೊತ್ತವನ್ನು ನಿರ್ಧರಿಸುವಲ್ಲಿ ಯಾವುದೇ ತಪ್ಪೆಸಗಿಲ್ಲ; ಆದರೆ ವಿಚ್ಛೇದಿತ ವ್ಯಕ್ತಿಯು ಮರು ಮದುವೆಯಾಗಿದ್ದು ಆತನಿಗೆ ತನ್ನ ಹೊಸ ಕುಟುಂಬವನ್ನು ನಡೆಸುವುದಕ್ಕಾಗಿ ನಾವು ಜೀವನಾಂಶ ಮೊತ್ತವನ್ನು 3,000 ರೂ.ಗಳಷ್ಟು ಇಳಿಸಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಹೇಳಿತು.