ನವದೆಹಲಿ: ಕರ್ನಾಟಕ ವಿಧಾನಸಭೆಯಿಂದ ತಮ್ಮ ಶಾಸಕತ್ವ ಅನರ್ಹಗೊಂಡಿದ್ದ 17 ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಬುಧವಾರಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಎಸ್.ವಿ. ರಮಣ, ನ್ಯಾಯಮುರ್ತಿಗಳಾದ ಸಂಜೀವ ಖನ್ನಾ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠದಿಂದ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಇಂದು ನಡೆಯುತ್ತಿತ್ತು.
ಅನರ್ಹ ಶಾಸಕರ ಪರವಾಗಿ ಮುಕುಲ್ ರೊಹಟಗಿ ವಾದ ಮಂಡಿಸಿದ್ದರು. ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು ಮತ್ತು ಸ್ಪೀಕರ್ ಪರ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು.
ಬುಧವಾರದಂದು ಅನರ್ಹ ಶಾಸಕರ ಪರ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿದೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ನಿಗದಿಯಾಗಿರುವ ಉಪಚುನಾವಣೆಯನ್ನು ಮುಂದೂಡುವಂತೆ ಕೋರಿ ಪೀಠಕ್ಕೆ ಅರ್ಜಿ ಸಲ್ಲಿಸುವುದಾಗಿ ಅನರ್ಹ ಶಾಸಕರ ಪರ ವಾದಿಸುತ್ತಿರುವ ವಕೀಲ ಮುಕುಲ್ ರೋಹಟಗಿ ಅವರು ಹೇಳಿದರು. ಹೀಗಾಗಿ ಸುದೀರ್ಘ ವಿಚಾರಣೆಯ ಅಗತ್ಯ ಇರುವುದರಿಂದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡುತ್ತಿರುವುದಾಗಿ ತ್ರಿಸದಸ್ಯ ಪೀಠ ಹೆಳಿದೆ.
ರಾಜೀನಾಮೆ ಸಲ್ಲಿಸಿದ್ದ ಶಾಸಕರಿಗೆ ಯಾವುದೇ ನೋಟೀಸು ಜಾರಿ ಮಾಡದೆ ಸ್ಪೀಕರ್ ಅವರು ಅನರ್ಹಗೊಳಿಸಿದ್ದಾರೆ. ಒಂದು ವಾರ ಮೊದಲೇ ನೋಟೀಸ್ ನೀಡಿ ವಿಚಾರಣೆ ನಡೆಸಬೇಕು ಎಂಬ ನಿಯಮ ಇದ್ದರು ಈ ಶಾಸಕರ ವಿಚಾರದಲ್ಲಿ ಅದನ್ನು ಪಾಲಿಸಿಲ್ಲ ಎಂದು ರೊಹಟಗಿ ಅವರು ತಮ್ಮ ವಾದವನ್ನು ಮಂಡಿಸಿದರು. ಇನ್ನು ಯಾವುದೇ ಶಾಸಕನ ರಾಜೀನಾಮೆ ವೈಯಕ್ತಿಕ ಮತ್ತು ಸ್ವಯಂಪ್ರೇರಿತವಾಗಿದ್ದಲ್ಲಿ ಅದನ್ನು ಸ್ಪೀಕರ್ ಅವರು ಅಂಗೀಕರಿಸಬೇಕು, ಆದರೂ ಇಲ್ಲಿ ಯಾವುದೇ ವಿಚಾರಣೆ ನಡೆಸದೇ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಲಾಗಿದೆ.
ಇದೀಗ ಈ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದ್ದು ಸ್ಪೀಕರ್ ಆದೇಶದಂತೆ ಈ ವಿಧಾನಸಭೆ ವಿಸರ್ಜನೆ ಆಗುವವರೆಗೆ ಅನರ್ಹ ಶಾಸಕರಿಗೆ ಸ್ಪರ್ಧೆ ಮಾಡುವಂತಿಲ್ಲ ಎಂಬ ಆದೇಶ ಇರುವುದರಿಂದ ಈ ಉಪಚುನಾವಣೆಗಳಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡದಂತಾಗಿದೆ. ಹಾಗಾಗಿ ಒಂದೋ ಅನರ್ಹ ಶಾಸಕರ ಸ್ಪರ್ಧೆಗೆ ಅವರಕಾಶ ನೀಡಿ ಇಲ್ಲವೇ ಉಪಚುನಾವಣೆಗೆ ತಡೆನೀಡಿ ಎಂದು ರೋಹಟಗಿ ಅವರು ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಿಕೊಂಡರು.