ಹೊಸದಿಲ್ಲಿ: ಏಕನಾಥ ಶಿಂಧೆ ಬಣವನ್ನೇ ನಿಜವಾದ ಶಿವಸೇನೆ ಎಂದು ಪರಿಗಣಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಉದ್ಧವ್ ಠಾಕ್ರೆ ಬಣಕ್ಕೆ ತುಸು ಹಿನ್ನಡೆಯಾಗಿದೆ. ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂ ಪೀಠ ನಿರಾಕರಿಸಿದೆ.
ಶಿವಸೇನೆ ಬಿಲ್ಲು ಬಾಣದ ಗುರುತಿನ ಚಿಹ್ನೆಯನ್ನು ಚುನಾವಣಾ ಆಯೋಗವು ಏಕನಾಥ್ ಶಿಂಧೆ ಬಣಕ್ಕೆ ನೀಡಿತ್ತು. ಇದನ್ನು ಪ್ರಶ್ನಿಸಿ ಠಾಕ್ರೆ ಬಣ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದೆ.
ತುರ್ತು ವಿಚಾರಣೆಯನ್ನು ಕೋರಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಕೀಲ ಅಮಿತ್ ಆನಂದ್ ತಿವಾರಿ ಈ ವಿಷಯವನ್ನು ಪ್ರಸ್ತಾಪಿಸಿದರು. “ಜಮ್ಮು ಮತ್ತು ಕಾಶ್ಮೀರ ಕುರಿತ ಸಂವಿಧಾನ ಪೀಠವು ಮುಗಿಯುವವರೆಗೆ ಕಾಯಿರಿ ಮತ್ತು ನಾವು ದಿನಾಂಕವನ್ನು ನೀಡುತ್ತೇವೆ” ಎಂದು ಚಂದ್ರಚೂಡ್ ಅವರೊಂದಿಗೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಇದ್ದ ಪೀಠ ಹೇಳಿದೆ.
ಇದನ್ನೂ ಓದಿ:Kushtagi: ಬಾಲಕ ಕಿಡ್ನ್ಯಾಪ್ ಪ್ರಕರಣ ; ಕೆಲವೇ ತಾಸುಗಳಲ್ಲಿ ಸುಖಾಂತ್ಯ
ಶಿವಸೇನೆಯಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಚುನಾವಣಾ ಸಮಿತಿಯು ತಪ್ಪಾಗಿ ಹೇಳಿದೆ. ರಾಜಕೀಯ ಪಕ್ಷದಲ್ಲಿ ಒಡಕು ಉಂಟಾಗಿದೆ ಎಂಬುದಕ್ಕೆ ಯಾವುದೇ ಮನವಿಗಳು ಮತ್ತು ಪುರಾವೆಗಳಿಲ್ಲದ ಕಾರಣ, ಚುನಾವಣಾ ಆಯೋಗದ ಸಂಶೋಧನೆಗಳು ಈ ನೆಲೆಯಲ್ಲಿ ಸಂಪೂರ್ಣವಾಗಿ ತಪ್ಪಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿನಿಧಿ ಸಭೆಯಲ್ಲಿ ಠಾಕ್ರೆ ಬಣವು ಅಗಾಧ ಬಹುಮತವನ್ನು ಹೊಂದಿದೆ. ಆದರೂ ಚುನಾವಣಾ ಸಮಿತಿಯು “ಪಕ್ಷಪಾತ ಮತ್ತು ಅನ್ಯಾಯದ ರೀತಿಯಲ್ಲಿ” ವರ್ತಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭಾರತದ ಚುನಾವಣಾ ಆಯೋಗವು ಚಿಹ್ನೆಗಳ ಆದೇಶದ ಪ್ಯಾರಾ 15 ರ ಅಡಿಯಲ್ಲಿ ವಿವಾದಗಳ ತಟಸ್ಥ ಮಧ್ಯಸ್ಥಗಾರನಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾಗಿದೆ. ಅದರ ಸಾಂವಿಧಾನಿಕ ಸ್ಥಾನಮಾನವನ್ನು ದುರ್ಬಲಗೊಳಿಸುವ ರೀತಿಯಲ್ಲಿ ವರ್ತಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.