Advertisement

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಕಡೆಗೂ ಸಿಬಿಐಗೆ

12:38 PM Oct 18, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಮತ್ತು ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ತನಿಖೆ ಅಂತೂ ಸಿಬಿಐ ಕೈಸೇರಿದ್ದು, ತನಿಖೆ ಆರಂಭವಾಗಿದೆ. ಸುಪ್ರೀಂಕೋರ್ಟ್‌ ಆದೇಶದ ಬಳಿಕವೂ ಪ್ರಕರಣದ ತನಿಖೆಯ ಹೊಣೆ ಸಿಐಡಿಗೆ ಹಸ್ತಾಂತರ ಆಗಿರಲಿಲ್ಲ. ಇದೀಗ ತನಿಖೆಗೆ ನೀಡಲಾಗಿದ್ದ ಗಡುವಿಗೆ 40 ದಿನಗಳಷ್ಟೇ ಬಾಕಿ ಉಳಿದಿದ್ದು, ಅಷ್ಟರೊಳಗೆ ಸಿಬಿಐ ತನಿಖೆ ನಡೆಸಬೇಕಾಗಿದೆ.

Advertisement

ಸುಪ್ರೀಂ ಆದೇಶದಂತೆ ಸಿಬಿಐ ತನಿಖೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ವಶದಲ್ಲಿರುವ ತನಿಖೆ ಕುರಿತ ಕಡತಗಳನ್ನು ತಮಿಳುನಾಡಿನ ಚೆನ್ನೈನಲ್ಲಿರುವ ಸಿಬಿಐನ ವಿಶೇಷ ಅಪರಾಧ ವಿಭಾಗಕ್ಕೆ ಹಸ್ತಾಂತರ ಮಾಡಲಿದೆ. ಇದರಿಂದಾಗಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿಯಿಂದ ಕ್ಲೀನ್‌ ಚಿಟ್‌ ಪಡೆದಿದ್ದ ಹಿಂದಿನ ಗೃಹ ಸಚಿವ ಹಾಗೂ ಈಗಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಐಪಿಎಸ್‌ ಅಧಿಕಾರಿಗಳಾದ ಆಶಿಷ್‌ ಮೋಹನ್‌ ಪ್ರಸಾದ್‌, ಪ್ರಣಬ್‌ ಮೊಹಂತಿ ಸೇರಿ ಕೆಲವರಿಗೆ ಮತ್ತೆ ತನಿಖೆ ಎದುರಿಸಬೇಕಾದ ಸಂಕಷ್ಟ ಎದುರಾಗಿದೆ. 

‌ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಿಬಿಐ ನಿರ್ದೇಶಕರು ಕರ್ನಾಟಕ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ಪತ್ರ ಬರೆದಿದ್ದು, ಪ್ರಕರಣದ ತನಿಖಾ ವರದಿಯನ್ನು ಚೆನ್ನೈನ ಸಿಬಿಐ ಕಚೇರಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ತನಿಖಾ ವರದಿಯನ್ನು (ಆತ್ಮಹತ್ಯೆಗೂ ಮುನ್ನ ಡಿವೈಎಸ್ಪಿ ಗಣಪತಿ ಮಾಡಿಸಿದ್ದ ವಿಡಿಯೋ, ಆರೋಪಿತರು ಮತ್ತು ಗಣಪತಿಯ ಪತ್ನಿ, ಮಗ, ಸಹೋದರ, ತಂದೆ ಸೇರಿದಂತೆ ಎಲ್ಲ ಸಾಕ್ಷ್ಯಗಳ ಹೇಳಿಕೆಗಳು, ಇತರೆ ದಾಖಲೆಗಳು)ಕಳುಹಿಸಿಕೊಡಲು ಸಿಐಡಿ ಮುಖ್ಯಸ್ಥ ಕಿಶೋರ್‌ ಚಂದ್ರ ಸಿದ್ಧತೆ ನಡೆಸಿದ್ದು,
ಒಂದೆರೆಡು ದಿನಗಳಲ್ಲಿ ವರದಿ ಚೆನ್ನೈನ ಸಿಬಿಐ ಅಧಿಕಾರಿಗಳ ಕೈ ಸೇರಲಿದೆ ಎಂದು ಮೂಲಗಳು ತಿಳಿಸಿವೆ.

ಹೇಗಿರಲಿದೆ ಸಿಬಿಐ ವಿಚಾರಣೆ: ಸುಪ್ರೀಂ ಕೋರ್ಟ್‌ ನಿರ್ದೇಶನ ಮೇರೆಗೆ ಸಿಬಿಐ ವಿಚಾರಣೆ ಆರಂಭಿಸಲಿದ್ದು, ಮೊದಲಿಗೆ ಪ್ರಕರಣದ ಸಂಪೂರ್ಣ ವರದಿಯನ್ನು ಸಿಐಡಿಯಿಂದ ತರಿಸಿಕೊಳ್ಳಲಿದೆ. ನಂತರ ಸಿಐಡಿಯ ತನಿಖಾ ಆಯಾಮಗಳು, ಸಾಕ್ಷ್ಯಗಳು, ದಾಖಲೆಗಳು, ಎಫ್
ಐಆರ್‌, ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್‌ಗಳನ್ನು ಪರಿಶೀಲಿಸಲಿದೆ. ಬಳಿಕ ಮತ್ತೂಮ್ಮೆ ಎಲ್ಲ ಆರೋಪಿಗಳು ಹಾಗೂ ಸಾಕ್ಷಿ ನೋಟಿಸ್‌ ನೀಡಿ ವಿಚಾರಣೆ ನಡೆಸಲಿದೆ. ಬಳಿಕ ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ. ಆ ವೇಳೆ ಸಿಐಡಿ ತನಿಖೆ ಸಮರ್ಪಕವಾಗಿದೆ ಎಂದು
ಹೇಳಬಹುದು ಅಥವಾ ತನಿಖೆಯಲ್ಲಿ ಲೋಪದೋಷ ಕಂಡು ಬಂದಲ್ಲಿ ಮತ್ತೂಮ್ಮೆ ಪ್ರಕರಣ ತನಿಖೆಗೆ ಆದೇಶ ನೀಡುವಂತೆ ಕೋರ್ಟ್‌ಗೆ ಮನವಿ
ಮಾಡಿಕೊಳ್ಳಬಹುದು. ಸಿಐಡಿ ತನಿಖೆ ಸರಿಯಾಗಿದೆ ಎಂದರೆ ಅಲ್ಲಿಗೆ ಪ್ರಕರಣಕ್ಕೆ ತೆರೆ ಬೀಳುತ್ತದೆ. ಮರು ತನಿಖೆಗೆ ಕೋರಿದರೆ ಕೋರ್ಟ್‌ ಆದೇಶ ಪಡೆದು ಪ್ರಕರಣ ಸಂಬಂಧ ಹೊಸದಾಗಿ ಎಫ್ಐಆರ್‌ ದಾಖಲಿಸಿಕೊಂಡು ಆರಂಭದಿಂದ ತನಿಖೆ ನಡೆಸಬೇಕು.

ಉಳಿದಿರುವುದು ಕೇವಲ 40 ದಿನ ಮಾತ್ರ: ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕೋರಿ ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಸೆ. 5ರಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಅಲ್ಲದೆ, ಮೂರು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಸಿಬಿಐ ಈಗಾಗಲೇ ತನಿಖೆ ಆರಂಭಿಸಬೇಕಿತ್ತಾದರೂ ಇದುವರೆಗೂ ಪ್ರಕರಣ ವರ್ಗಾಯಿಸಿರಲಿಲ್ಲ. ಸೋಮವಾರವಷ್ಟೇ ಸಿಬಿಐಯಿಂದ ತನಿಖಾ ವರದಿ ಹಸ್ತಾಂತರಿಸುವಂತೆ ಸಿಐಡಿಗೆ ಪತ್ರ ಬಂದಿದೆ.

Advertisement

ಸಿಐಡಿ ಪ್ರಕರಣದ ಸಂಪೂರ್ಣ ವರದಿಯನ್ನು ವಾರಾಂತ್ಯದಲ್ಲಿ ಹಸ್ತಾಂತರಿಸಬಹುದು. ಈಗಾಗಲೇ ಒಂದೂವರೆ ತಿಂಗಳು ಕಳೆದಿದ್ದು, ಬಾಕಿ ಉಳಿದಿರುವ ಒಂದೂವರೆ ತಿಂಗಳಲ್ಲಿ ನೂರಾರು ಮಂದಿಯ ವಿಚಾರಣೆ, ಸಾಕ್ಷ್ಯಗಳ ಹೇಳಿಕೆ, ಸಿಐಡಿಯ ಬಿ ರಿಪೋರ್ಟ್‌ ಪರಿಶೀಲನೆ ಸೇರಿದಂತೆ ಎಲ್ಲ ಪ್ರಕ್ರಿಯೆ ಮುಕ್ತಾಯಗೊಳಿಸಲು ಸಾಧ್ಯವೇ ಎಂಬ ಬಗ್ಗೆ ಕುತೂಹಲ ಮೂಡಿದೆ.

ಪ್ರಕರಣವೇನು?: 2016 ಜುಲೈ 7ರಂದು ಮಡಿಕೇರಿಯ ವಸತಿ ಗೃಹವೊಂದರಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಹಿರಿಯ ಅಧಿಕಾರಿಗಳು, ಸಚಿವ ಜಾರ್ಜ್‌ ವಿರುದ್ಧ ಕಿರುಕುಳದ
ಆರೋಪ ಮಾಡಿದ್ದರು. ಈ ಸಂಬಂಧ ಸರ್ಕಾರದ ಸೂಚನೆ ಮೇರೆಗೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಸಚಿವ ಕೆ.ಜೆ.ಜಾರ್ಜ್‌, ಐಪಿಎಸ್‌ ಅಧಿಕಾರಿಗಳಾದ ಆಶಿಷ್‌ ಮೋಹನ್‌ ಪ್ರಸಾದ್‌, ಪ್ರಣಬ್‌ ಮೊಹಂತಿ ಸೇರಿದಂತೆ ಕೆಲವರನ್ನು ವಿಚಾರಣೆ ನಡೆಸಿತ್ತು. ಬಳಿಕ ಗಣಪತಿ  ಆಪಾದನೆಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಪರಿಗಣಿಸಿ ಆರೋಪಿತರಿಗೆ ಕ್ಲೀನ್‌ಚೀಟ್‌ ನೀಡಿತ್ತು.

ಇದನ್ನು ಪ್ರಶ್ನಿಸಿ ಗಣಪತಿ ತಂದೆ ಕುಶಾಲಪ್ಪ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಸೆ.5ರಂದು ಈ ಪ್ರಕರಣ ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಬಗ್ಗೆ ತೀರ್ಮಾನವಾಗಬೇಕಿದೆ. ಸಚಿವರು, ಇಬ್ಬರು ಅಧಿಕಾರಿಗಳ
ವಿರುದ್ಧ ಗಂಭೀರ ಆರೋಪಿವಿದ್ದು, ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಸ್ವತಂತ್ರ ತನಿಖಾ ಸಂಸ್ಥೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಪ್ರಕರಣದ ಮರು ವಿಚಾರಣೆ ನಡೆಸಿ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸಿಬಿಐಗೆ ಸೂಚಿಸಿತ್ತು.

ತನಿಖೆಯಲ್ಲಿ ಸಾಕ್ಷ್ಯ ನಾಶ ಆರೋಪದ ಸ್ಥಿತಿಯೇನು?
ಈ ಮಧ್ಯೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ವಶಕ್ಕೆ ಪಡೆದಿದ್ದ ದಾಖಲೆಗಳ ಪೈಕಿ 2,500 ಫೋಟೋಗಳು, 57 ಸಂದೇಶಗಳು, 100 ಇ-ಮೇಲ್‌ ಸಂದೇಶಗಳು, 145 ಪಿಡಿಎಫ್ ಫೈಲ್‌ಗ‌ಳು, 791 ಟೆಕ್ಸ್ಟ್ ಪೈಲ್‌ಗ‌ಳು, 31 ಪಿಪಿಟಿ ಫೈಲ್‌ಗ‌ಳು, ಗಣಪತಿ ಮೊಬೈಲ್‌ನಲ್ಲಿದ್ದ 52 ಸಂದೇಶಗಳು, ಶಾಸಕರು, ಸಚಿವರು ಸೇರಿದಂತೆ 352 ಹೆಸರುಗಳು, 16 ಜಿಪಿ ಸಾಮರ್ಥಯದ ಪೆನ್‌ಡ್ರೈವ್‌ನಲ್ಲಿದ್ದ 199 ಫೈಲ್‌, 8 ಜಿಪಿ ಪೆನ್‌ ಡ್ರೈವ್‌ನಲ್ಲಿದ್ದ 185 ಫೈಲ್‌, 910 ಎಂಎಸ್‌ ಎಕ್ಲೆಲ್‌ ಫೈಲ್‌ಗ‌ಳು, ಗಣಪತಿ ಮೊಬೈಲ್‌ ನಲ್ಲಿದ್ದ 31 ಕರೆಗಳ ಮಾಹಿತಿ, ಸಚಿವರು, ಶಾಸಕರು, ಕೇಂದ್ರ ಸಚಿವರ ಸಂಬಂಧಿಕರ ಕಾಲ್‌ ಡಿಟೇಲ್ಸ್‌ ಹಾಗೂ ಆತ್ಮಹತ್ಯೆ ಸ್ಥಳದಲ್ಲಿದ್ದ ಪೆನ್‌ಡ್ರೈವ್‌ ಕೂಡ ನಾಶವಾಗಿದೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿದೆ. ಈ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆಯೂ ಕೇವಲ ಮೃತ ಗಣಪತಿ ಸಂಬಂಧಿಕರು, ಆರೋಪಿಗಳ ಹೇಳಿಕೆಗಳಿಂದಲೇ ಸಿಬಿಐ ವಿಚಾರಣೆ ಸೂಕ್ತ ರೀತಿಯಲ್ಲಿ ನಡೆಯುತ್ತದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಅಥವಾ ದಾಖಲೆಗಳ ನಾಶದ ಬಗ್ಗೆಯೂ ತನಿಖೆ ನಡೆಸುತ್ತದೆಯೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಗಣಪತಿ ಆತ್ಮಹತ್ಯೆ ಕುರಿತು ದೆಹಲಿಯ ಸಿಬಿಐ ನಿರ್ದೇಶಕರಿಂದ ಸೋಮವಾರವಷ್ಟೇ ಪತ್ರ ಬಂದಿದ್ದು, ಚೆನ್ನೈನಲ್ಲಿರುವ ಸಿಬಿಐನ ವಿಶೇಷ ಅಪರಾಧ ವಿಭಾಗಕ್ಕೆ ಕಡತಗಳನ್ನು ಹಸ್ತಾಂತರಿಸುವಂತೆ ಪತ್ರದಲ್ಲಿ ಸೂಚಿಸಲಾ  ಗಿದೆ.ಈ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಪ್ರಕರಣದ ಸಂಪೂರ್ಣ ವರದಿಯನ್ನು ಕಳುಹಿಸಿ ಕೊಡಲಾಗುವುದು. 

*ಕಿಶೋರ್‌ ಚಂದ್ರ,  ಸಿಐಡಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next