ಹೊಸದಿಲ್ಲಿ : ಉದ್ಯಮಿ ಸುಬ್ರತೋ ರಾಯ್ ಒಡೆತನದ ಸಹಾರಾ ಸಮೂಹದ ಎರಡು ಕಂಪೆನಿಗಳು ಹೂಡಿಕೆದಾರರಿಗೆ ಬಾಕಿ ಇರಿಸಿರುವ 14,799 ಕೋಟಿ ರೂ.ಗಳ ವಸೂಲಿ ಸಂಬಂಧ ಸುಪ್ರೀಂ ಕೋರ್ಟ್ ಇಂದು ಸೋಮವಾರ 39,000 ಕೋಟಿ ರೂ. ಮೌಲ್ಯದ ಆ್ಯಂಬಿ ವ್ಯಾಲಿ ಪ್ರಾಪರ್ಟಿಯನ್ನು ಜಪ್ತಿ ಮಾಡಿಕೊಂಡಿದೆ.
‘ಸೆಬಿಗೆ ನಾವು 14,000 ಕೋಟಿ ರೂ. ಕೊಡಬೇಕಿದ್ದು ಈ ಪೈಕಿ ಈಗಾಗಲೇ 11,000 ಕೋಟಿ ರೂ.ಗಳನ್ನು ಪಾವತಿಸಲಾಗಿದೆ’ ಎಂದು ಸಹಾರಾ ಸಮೂಹ ಇಂದು ಸುಪ್ರೀಂ ಕೋರ್ಟ್ ಮುಂದೆ ಒಪ್ಪಿಕೊಂಡಿತು.
ಜಸ್ಟಿಸ್ ದೀಪಕ್ ಮಿಶ್ರಾ, ಜಸ್ಟಿಸ್ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಎ ಕೆ ಸಿಕ್ರಿ ಅವರನ್ನು ಒಳಗೊಂಡ ಸುಪ್ರೀಂ ಪೀಠವು ಸಹಾರಾಗೆ “ಫೆ.20ರ ಒಳಗಾಗಿ ಯಾವುದೇ ರೀತಿಯ ಪರಭಾರೆಯಿಂದ ಮುಕ್ತವಾಗಿರುವ ಕಂಪೆನಿಯ ಆಸ್ತಿಯನ್ನು ಪಟ್ಟಿ ಮಾಡಿಕೊಡಬೇಕು’ ಎಂದು ಆದೇಶಿಸಿ ಮುಂದಿನ ವಿಚಾರಣಾ ದಿನವನ್ನು ಫೆ.27ಕ್ಕೆ ನಿಗದಿಸಿತು.
ಇದೇ ವೇಳೆ ಸಹಾರಾ ಸಮೂಹವು ಕೇಂದ್ರ ಸರಕಾರದ 2016ರ ನವೆಂಬರ್ 28ರ ಆದೇಶದ ಪ್ರಕಾರ 600 ಕೋಟಿ ರೂ.ಗಳ ಠೇವಣಿಯನ್ನು ಇರಿಸಿ, ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಮತ್ತು ಇತರರ ಪೆರೋಲ್ ವಿಸ್ತರಣೆಯನ್ನು ಪಡೆದುಕೊಂಡಿತು.
ಸುಬ್ರತಾ ರಾಯ್ ಮತ್ತು ಇತರರಿಗೆ ಮಂಜೂರಾಗಿದ್ದ ತಾತ್ಕಾಲಿಕ ಪೆರೋಲ್ ಇಂದು ಫೆ.6ರ ಸೋಮವಾರ ಮುಗಿಯಲಿರುವುದರಿಂದ ಈ ವಿಷಯವನ್ನು ಅದಕ್ಕೆ ಮುನ್ನವೇ ವಿಚಾರಣೆಗೆ ಎತ್ತಿಕೊಳ್ಳುವಂತೆ ರಾಯ್ ಅವರ ವಕೀಲ ಕಪಿಲ್ ಸಿಬಲ್ ಅವರು ಸಲ್ಲಿಸಿದ ಕೋರಿಕೆಯ ಪ್ರಕಾರ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ಕೈಗೊಂಡಿತು.