ಹೊಸದಿಲ್ಲಿ/ತಿರುವನಂತಪುರ: ಕೇರಳದಲ್ಲಿ ಸೋಂಕಿನ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಯಲ್ಲಿ 11ನೇ ತರಗತಿಗಳ ಪರೀಕ್ಷೆಗಳನ್ನು ವಾರ ಕಾಲ ಮುಂದೂಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇರಳ ಸರಕಾರಕ್ಕೆ ಸೂಚಿಸಿದೆ. ಸಣ್ಣ ಮಕ್ಕಳನ್ನು ಸೋಂಕಿನ ಭೀಕರತೆಗೆ ಒಡ್ಡಬಾರದು ಎಂದು ಹೇಳಿದ ನ್ಯಾ| ಎ.ಎಂ.ಖಾನ್ವಿಲ್ಕರ್, ನ್ಯಾ| ಹೃಷಿಕೇಶ್ ರಾಯ್, ನ್ಯಾ| ಸಿ.ಟಿ.ರವಿಕು ಮಾರ್ ಅವರನ್ನೊಳಗೊಂಡ ಪೀಠ ಅಭಿಪ್ರಾಯ ಪಟ್ಟಿದೆ. ದೇಶದಲ್ಲಿನ ಒಟ್ಟು ಸೋಂಕಿನ ಪೈಕಿ ಶೇ.70 ಕೇರಳದಲ್ಲಿಯೇ ಇದೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿ ಸಿದೆ. ರಾಜ್ಯ ಸರಕಾರ ಪ್ರಕಟಿಸಿರುವ ಪ್ರಕಾರ ಸೆ.6ರಿಂದ ಪರೀಕ್ಷೆಗಳು ಶುರುವಾಗಲಿವೆ.
ಲಸಿಕೆ ಕೊರತೆ: ಕೇರಳದಲ್ಲಿ ಕೊವಿಶೀಲ್ಡ್ ಲಸಿಕೆಯ ಕೊರತೆ ಉಂಟಾಗಿದೆ. ವಿಶೇಷ ವಾಗಿ ಆರು ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇದೆ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ. ಮಾಸಾಂತ್ಯದ ವರೆಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ. ಇದೇ ವೇಳೆ, ಕೇರಳದಲ್ಲಿ ಶುಕ್ರವಾರ 29,322 ಸೋಂಕು ಪ್ರಕರಣ ದೃಢಪಟ್ಟಿದೆ ಮತ್ತು 131 ಮಂದಿ ಅಸುನೀಗಿದ್ದಾರೆ. ಸೋಂಕು ಪಾಸಿ ಟಿವಿಟಿ ಪ್ರಮಾಣ ಶೇ.17.91. ರಾಜ್ಯದಲ್ಲಿ ಈಗ 41.51 ಲಕ್ಷ ಸೋಂಕು ಪ್ರಕರಣಗಳಿವೆ.
ಪರಿಹಾರ ಯಾವಾಗ?: ಸೋಂಕಿನಿಂದ ಅಸುನೀಗಿದವರಿಗೆ ಮರಣ ಪ್ರಮಾಣಪತ್ರ ನೀಡುವುದರ ಬಗ್ಗೆ ನಿಯಮ ರೂಪಿಸುವಲ್ಲಿ ವಿಳಂಬವಾಗುತ್ತಿರುವುದಕ್ಕೂ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ನ್ಯಾ| ಎಂ.ಆರ್.ಶಾ ಮತ್ತು ನ್ಯಾ| ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನೆ ಮಾಡಿದೆ. ಜೂ.30ರಂದೇ ಈ ಮರಣ ಪ್ರಮಾಣ ಪತ್ರ ನೀಡುವ ಬಗ್ಗೆ ನಿಯಮಗಳನ್ನು ರಚಿಸಬೇಕು ಎಂದು ನ್ಯಾಯಪೀಠ ಆದೇಶಿಸಿತ್ತು. ಅದರ ಪಾಲನೆ ಏಕೆ ಆಗಲಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಕೇಳಿತು ನ್ಯಾಯಪೀಠ. ಈ ಬಗ್ಗೆ ಸೆ.11ರ ಒಳಗಾಗಿ ವರದಿ ಸಲ್ಲಿಸುವಂತೆ ನ್ಯಾಯಪೀಠ ಸರಕಾರಕ್ಕೆ ಸೂಚಿಸಿತು. ಇದೇ ವೇಳೆ, ಸೋಂಕಿನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಮೂರನೇ ಅಲೆ ಬಂದ ಬಳಿಕ ಕೊಡಲಾಗುತ್ತದೆಯೇ ಎಂದು ನ್ಯಾಯಪೀಠ ಪ್ರಶ್ನೆ ಮಾಡಿತು.
4 ಲಕ್ಷದತ್ತ ಸಕ್ರಿಯ ಸೋಂಕು: ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ ದೇಶದಲ್ಲಿ 45,352 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 366 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 3,99,778ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.97.45 ಆಗಿದೆ.