ಹೊಸದಿಲ್ಲಿ: ಕರ್ನಾಟಕಕ್ಕೆ ಪ್ರತೀ ದಿನದ ಆಮ್ಲಜನಕ ಹಂಚಿಕೆಯನ್ನು 965 ಮೆ. ಟನ್‌ಗಳಿಂದ 1,200 ಮೆ. ಟನ್‌ಗಳಿಗೆ ಹೆಚ್ಚಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಮೂಲಕ ಇದನ್ನು ಪ್ರಶ್ನಿಸಿದ್ದ ಕೇಂದ್ರ ಸರಕಾರಕ್ಕೆ ಹಿನ್ನಡೆಯಾಗಿದೆ.
ಕರ್ನಾಟಕದ ಜನತೆಯನ್ನು ಸಂಕಷ್ಟಕ್ಕೆ ದೂಡಲು ನಾವು ಸಿದ್ಧರಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಜಾ ಮಾಡಿದೆ.
ಇದರಿಂದಾಗಿ ರಾಜ್ಯದ ಜನತೆ ಎದುರಿಸುತ್ತಿದ್ದ ಆಮ್ಲಜನಕ ಸಮಸ್ಯೆ ಬಹುತೇಕ ನಿವಾರಣೆಯಾಗುವ ಸಾಧ್ಯತೆ ಇದೆ. ಮುಂದಿನ ಒಂದು ವಾರಕ್ಕೆ ಎಷ್ಟು ಆಮ್ಲಜನಕ ಅಗತ್ಯ ಎಂಬ ವಿವರವನ್ನು ರಾಜ್ಯ ಸರಕಾರವು ಕೇಂದ್ರಕ್ಕೆ ಸಲ್ಲಿಸಬೇಕು. ಇದನ್ನು ಕೇಂದ್ರವು ನಾಲ್ಕು ದಿನಗಳ ಒಳಗೆ ಪರಿಗಣಿಸಬೇಕು.
ಅಲ್ಲಿವರೆಗೆ ಈಗಿನಿಂದಲೇ ಕೇಂದ್ರವು ದಿನಕ್ಕೆ 1,200 ಮೆ. ಟನ್ ಆಮ್ಲಜನಕವನ್ನು ಕರ್ನಾಟಕಕ್ಕೆ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿದೆ.
ಪೂರೈಕೆ ಸರಪಳಿಗೆ ತೊಂದರೆ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂನಲ್ಲಿ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆಮ್ಲಜನಕ ಹಂಚಿಕೆ ವಿಚಾರದಲ್ಲಿ ಪ್ರತಿಯೊಂದು ಹೈಕೋರ್ಟ್ ಕೂಡ ಆದೇಶ ಹೊರಡಿಸುತ್ತ ಹೋದರೆ ದೇಶದ ಆಮ್ಲಜನಕ ಪೂರೈಕೆ ಸರಪಳಿಗೆ ಅಡ್ಡಿಯಾಗುತ್ತದೆ. ಹೀಗಾಗಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಕೇಂದ್ರ ಸರಕಾರವು ಕರ್ನಾಟಕದ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿದ್ಧವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸೋಂಕು ಮತ್ತು ಸಾವಿನ ಸ್ಥಿತಿಗತಿ ಪರಿಶೀಲಿಸಿಯೇ ಕರ್ನಾಟಕ ಹೈಕೋರ್ಟ್ ನ್ಯಾಯಯುತ ಆದೇಶ ಹೊರಡಿಸಿದೆ. ಚಾಮರಾಜನಗರ, ಕಲಬುರಗಿಯಲ್ಲಿ ಆಮ್ಲಜನಕ ಸಿಗದೆ ಜನರು ಪ್ರಾಣ ತೆತ್ತಿರುವುದನ್ನೂ ಕೋರ್ಟ್ ಪರಿಗಣಿಸಿದೆ. ನ್ಯಾಯಾಧೀಶರು ಕೂಡ ಮನುಷ್ಯರೇ. ಜನರ ನೋವು ಅವರಿಗೆ ಅರ್ಥವಾಗುತ್ತದೆ. ಇದನ್ನೆಲ್ಲ ನೋಡಿಯೂ ಹೈಕೋರ್ಟ್ ಕಣ್ಣುಮುಚ್ಚಿರಲು ಸಾಧ್ಯವಿಲ್ಲ. ಇದರಲ್ಲಿ ನಾವು ಮಧ್ಯಪ್ರವೇಶಿಸಲು ಇಚ್ಛಿಸುವುದಿಲ್ಲ’ ಎಂದಿತು.