ನವದೆಹಲಿ: ಹಣಕಾಸು ಸೇವಾ ಸಂಸ್ಥೆಗಳು ಕ್ರಿಪ್ಟೋಕರೆನ್ಸಿ ಅಥವಾ ಬಿಟ್ ಕಾಯಿನ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದರ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಇಂದು ತೆರವುಗೊಳಿಸಿದೆ.
ಜಸ್ಟಿಸ್ ರೊಹಿಂಗ್ಟನ್ ಪಾಲಿ ನರಿಮನ್, ಜಸ್ಟಿಸ್ ಎಸ್. ರವೀಂದ್ರ ಭಟ್ ಮತ್ತು ಜಸ್ಟಿಸ್ ವಿ. ರಾಮಸುಬ್ರಮಣಿಯಣ್ ಅವರಿದ್ದ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿ ಈ ತೀರ್ಪನ್ನು ನೀಡಿದೆ.
ದೇಶೀ ಕರೆನ್ಸಿಗಳಿಗೆ ಸಮಾನಾಂತರವಾಗಿ ನಡೆಸಲಾಗುತ್ತಿರುವ ಈ ರೀತಿಯ ಪರ್ಯಾಯ ನಗದು ವ್ಯವಹಾರಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಎಪ್ರಿಲ್ 2018ರಂದು ನಿಷೇಧವನ್ನು ಹೇರಿ ಆದೇಶವನ್ನು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿನಲ್ಲಿ ಹಲವಾರು ಅರ್ಜಿಗಳು ಸಲ್ಲಿಸಲ್ಪಟ್ಟಿದ್ದವು.
ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಅಥವಾ ಬಿಟ್ ಕಾಯಿನ್ ಗಳ ಮೂಲಕ ವ್ಯವಹಾರ ನಡೆಸುವುದು, ಅವುಗಳನ್ನು ಸಂಗ್ರಹಿಸಿಡುವುದು, ಮಾರಾಟ ಮಾಡುವುದು, ಬಳಸುವುದು ಇತ್ಯಾದಿ ಅಂಶಗಳ ಮೇಲೆ ತಡೆ ಹೇರುವ ಉದ್ದೇಶದಿಂದ ಕೆಂದ್ರ ಸರಕಾರವು ಈಗಾಗಲೇ ಕಾನೂನಿನ ಕರಡೊಂದನ್ನು ಸಿದ್ಧಪಡಿಸಿದೆ.
ಮತ್ತು ಈ ಕರಡು ಕಾನೂನಿನಲ್ಲಿ ಈ ರೀತಿಯ ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಅಥವಾ ಇವೆರಡನ್ನೂ ಏಕಕಾಲದಲ್ಲಿ ವಿಧಿಸಬಹುದಾದ ಪ್ರಸ್ತಾಪ ಇದರಲ್ಲಿದೆ.
ಇಷ್ಟು ಮಾತ್ರವಲ್ಲದೇ ಸರಕಾರದ ಮಂಡಳಿಯೊಂದು ಸಿದ್ಧಪಡಿಸಿರುವ ಈ ಕರಡು ಕಾನೂನಿನಲ್ಲಿ ಭಾರತದಲ್ಲಿ ಸರಕಾರ ಪ್ರಾಯೋಜಿತ ಡಿಜಿಟಲ್ ಕರೆನ್ಸಿಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಮೂಲಕ ಚಲಾವಣೆಗೆ ತರುವ ಕುರಿತಾದ ಪ್ರಸ್ತಾವನೆಯನ್ನೂ ಸಹ ಮಾಡಲಾಗಿದೆ.