ಹೊಸದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಅಪಾಯಕಾರಿ ಸ್ಥಿತಿಗೆ ವಾಯುಗುಣಮಟ್ಟ ತಲುಪಿರುವ ಹಿನ್ನಲೆಯಲ್ಲಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪುನರಾರಂಭಿಸಿತು ಮತ್ತು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲು ಮಂಗಳವಾರ ತುರ್ತು ಸಭೆಯನ್ನು ಕರೆಯುವಂತೆ ಕೇಂದ್ರಕ್ಕೆ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರ ನೇತೃತ್ವದ ಪೀಠ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ದೆಹಲಿಯ ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಸಭೆಗೆ ಹಾಜರಾಗಿ ಸಮಿತಿಯ ಮುಂದೆ ತಮ್ಮ ಸಲ್ಲಿಕೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಇದೆ ವೇಳೆ ವಾಯು ಮಾಲಿನ್ಯ ಮಾಡಿದುರಲ್ಲಿ ಕೃಷಿ ತ್ಯಾಜ್ಯ ಸುಡುವುದು ಮಾತ್ರವಲ್ಲದೆ, ನಿರ್ಮಾಣ ಚಟುವಟಿಕೆ, ಕೈಗಾರಿಕೆ, ಸಾರಿಗೆ, ವಿದ್ಯುತ್ ಮತ್ತು ವಾಹನ ದಟ್ಟಣೆ ಪ್ರಮುಖ ಅಪರಾಧಿಗಳು ಎಂದು ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಬಂದಿದೆ.
ಇಲ್ಲಿಯವರೆಗೆ, ಎರಡು ತಿಂಗಳು ಹೊರತುಪಡಿಸಿ ಕೃಷಿ ತ್ಯಾಜ್ಯ ಸುಡುವಿಕೆಯಿಂದಾಗಿ ವಾಯು ಮಾಲಿನ್ಯಕ್ಕೆ ಪರಿಣಾಮ ಅಷ್ಟೊಂದು ಇಲ್ಲ ಎಂದು ಅಫಿಡವಿಟ್‌ಗಳು ಹೇಳುತ್ತವೆ. ಆದರೆ, ಪ್ರಸ್ತುತ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಉತ್ತಮ ಪ್ರಮಾಣದ ಹುಲ್ಲು ಸುಡುವಿಕೆ ನಡೆಯುತ್ತಿದೆ ಎಂದು ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ ಹೇಳಿದೆ.
ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು ಎರಡು ವಾರಗಳ ಕಾಲ ರೈತರನ್ನು ತ್ಯಾಜ್ಯ ಸುಡದಂತೆ ಇರಲು ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಳಿದೆ.
ವಾಹನಗಳಿಂದಾಗುವ ಮಾಲಿನ್ಯ, ಕೈಗಾರಿಕಾ ಮಾಲಿನ್ಯ ಮತ್ತು ಧೂಳು ನಿಯಂತ್ರಣ ಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಒತ್ತಿ ಹೇಳಿದೆ.