Advertisement

ನ್ಯಾಯಾಂಗ ವಿವಾದ ಬೀದಿಗೆ ಬಂದಿದ್ದು ತರವಲ್ಲ

06:30 AM Jan 13, 2018 | |

ಬೆಂಗಳೂರು: ಸುಪ್ರೀಂ ಕೋರ್ಟ್‌ ಆಡಳಿತದ ಅವ್ಯವಸ್ಥೆ ಮತ್ತು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾಧ್ಯಮಗಳ ಮೂಲಕ ಆರೋಪ ಮಾಡಿರುವ ನಾಲ್ವರು ನ್ಯಾಯಮೂರ್ತಿಗಳ ವರ್ತನೆಗೆ ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಆಘಾತ ವ್ಯಕ್ತವಾಗಿದೆ.

Advertisement

ಇದೊಂದು ದುರದೃಷ್ಟಕರ ಬೆಳವಣಿಗೆ. ನ್ಯಾಯಾಂಗ ಕ್ಷೇತ್ರದ ಬಗ್ಗೆ ಜನರಿಗೆ ಇದ್ದ ವಿಶ್ವಾಸ, ಗೌರವಗಳಿಗೆ ಧಕ್ಕೆಯಾಗಿದೆ. ನ್ಯಾಯ ಹೇಳುವ ಜವಾಬ್ದಾರಿಯುತ ಸ್ಥಾನದಲ್ಲಿರುವ ನ್ಯಾಯಮೂರ್ತಿಗಳು ದೇಶದ ಸರ್ವೋತ್ಛ ನ್ಯಾಯಾಂಗ ಸಂಸ್ಥೆಯ ಗೌರವ ಕಾಪಾಡಬೇಕಿತ್ತು. ಅದನ್ನು ಬಿಟ್ಟು ತಮ್ಮೊಳಗಿನ ವಿಚಾರಗಳನ್ನು ಬೀದಿಗೆ ತಂದಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

ನಾಲ್ವರು ನ್ಯಾಯಮೂರ್ತಿಗಳ ಕ್ರಮದಿಂದ ಸರ್ವಶ್ರೇಷ್ಠ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರಲ್ಲಿದ್ದ ನಂಬಿಕೆ, ವಿಶ್ವಾಸಕ್ಕೆ ಮರ್ಮಾಘಾತವಾಗಿದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಾ.ಎಂ.ರಾಮಾ ಜೋಯಿಸ್‌ ಹೇಳಿದರೆ, ಇದರ ಹಿಂದೆ ಪ್ರತಿಪಕ್ಷಗಳ ರಾಜಕೀಯ ಸಂಚಿದೆಯೇ ಎಂಬ ಶಂಕೆ ಉದ್ಭವಿಸಿದೆ ಎಂದು ಹಿರಿಯ ವಕೀಲ ಡಾ.ಬಿ.ವಿ.ಆಚಾರ್ಯ ಹೇಳಿದ್ದಾರೆ. ಇದರಿಂದ ನ್ಯಾಯಮೂರ್ತಿಗಳಿಗೆ ಕೆಟ್ಟ ಸಂಪ್ರದಾಯ ಹಾಕಿಕೊಡುವ ಸಾಧ್ಯತೆ ಇದೆ ಎಂದು ಹಿರಿಯ ವಕೀಲ ಹಾರನಹಳ್ಳಿ ರಾಮಸ್ವಾಮಿ ಆತಂಕ ವ್ಯಕ್ತಪಡಿಸಿದ್ದರೆ, ನ್ಯಾಯಮೂರ್ತಿಗಳ ಈ ನಡವಳಿಕೆಗೆ ಕಾರಣರಾದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಮತ್ತೂಬ್ಬ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಆಗ್ರಹಿಸಿದ್ದಾರೆ.

ವಿಶ್ವಾಸಕ್ಕೆ ಮರ್ಮಾಘಾತ- ನ್ಯಾ.ರಾಮಾ ಜೋಯಿಸ್‌
ಈ ಘಟನೆ ಅತ್ಯಂತ ದುರದೃಷ್ಟಕರ. ರಾಷ್ಟ್ರಕ್ಕೆ ನ್ಯಾಯ ಕೊಡುವ ವ್ಯಕ್ತಿಗಳು ಪರಸ್ಪರ ಜಗಳವಾಡಿಕೊಂಡು ಆ ಜಗಳದ ಪರಿಣಾಮವನ್ನು ಜನರಿಗೆ ಮನಗಾಣುವ ಹಾಗೆ ಮಾಡಿರುವುದು ಅತ್ಯಂತ ದುಃಖಕರ. ಇದರಿಂದ ಸರ್ವಶ್ರೇಷ್ಠ ನ್ಯಾಯಾಂಗವಾಗಿರುವ ಸುಪ್ರೀಂ ಕೋರ್ಟ್‌ನ ಮೇಲೆ ಜನತೆ ಇಟ್ಟಿದ್ದ ನಂಬಿಕೆ ಮತ್ತು ವಿಶ್ವಾಸಕ್ಕೆ ಮರ್ಮಾಘಾತವಾಗಿದೆ. ಇಂತಹ ವಿಷಯ ದೇಶಕ್ಕೆ ನ್ಯಾಯ ಹೇಳುವ ಸ್ಥಾನದಲ್ಲಿರುವವರಿಗೆ ತಿಳಿಯಲಿಲ್ಲ ಎಂಬುದು ದುಃಖದ ಸಂಗತಿ. ಸುಪ್ರೀಂ ಕೋರ್ಟ್‌ ನೇಮಕಾತಿಯಲ್ಲಿ ನಿಯಮ ಬಿಟ್ಟು, ಸಂಬಂಧವಿಲ್ಲದ ವಿಚಾರಗಳ ಆಧಾರದ ಮೇಲೆ ನೇಮಕಾತಿ ಮಾಡಿದರೆ ಹೀಗಾಗುತ್ತದೆ. ಅದರ ಪರಿಣಾಮವನ್ನು ನ್ಯಾಯಾಂಗ ಮತ್ತು ದೇಶದ ಜನ ಅನುಭವಿಸುವಂತಾಗಿದೆ.

ರಾಜಕೀಯ ಸಂಚಿದೆಯೇ?- ಡಾ.ಬಿ.ವಿ.ಆಚಾರ್ಯ
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದು ಅತ್ಯಂತ ದುರದೃಷ್ಟಕರ ಸಂಗತಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಸ್ವತಂತ್ರ ಮತ್ತು ಹೆಚ್ಚು ಶಕ್ತಿಯುತವಾಗಿದೆ. ಜತೆಗೆ ಪ್ರಜಾಪ್ರಭುತ್ವದ ಶಕ್ತಿ ಹೆಚ್ಚಿಸಲೂ ಸಹಕಾರಿಯಾಗಿದೆ. ಸರ್ಕಾರ, ಅಧಿಕಾರಿಗಳು ಯಾರೇ ತಪ್ಪು ಮಾಡಿದರೂ ಜನ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಅಂತಹ ನ್ಯಾಯಾಂಗ ಈಗ ವಿಭಜನೆಯಾಗಿರುವುದು, ನ್ಯಾಯಮೂರ್ತಿಗಳು ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವುದು ಅತ್ಯಂತ ನೋವಿನ ಸಂಗತಿ. ನ್ಯಾಯಾಂಗದ ಆಂತರಿಕ ವಿಚಾರಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವಂತಿಲ್ಲ ಎಂಬ ನಿಯಮವನ್ನೂ ಅವರು ಮುರಿದಿದ್ದಾರೆ.

Advertisement

ನಾವು ಬೇರೆ ದಾರಿ ಇಲ್ಲದೆ ಮಾಧ್ಯಮಗಳ ಮುಂದೆ ಬರಬೇಕಾಯಿತು ಎಂದು ನಾಲ್ವರು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದರೆ, ಅದಕ್ಕೆ ಮುನ್ನ ಸಿಪಿಎಂ ನಾಯಕ ಡಿ.ರಾಜಾ ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಮೂರ್ತಿ ಚಲಮೇಶ್ವರ್‌ ಭೇಟಿಯಾಗಿದ್ದು, ತಮ್ಮ ಭೇಟಿಗೆ ನ್ಯಾ. ಚಲಮೇಶ್ವರ್‌ ಅವಕಾಶ ಮಾಡಿಕೊಟ್ಟಿದ್ದು, ಇದರ ಹಿಂದೆ ಪ್ರತಿಪಕ್ಷಗಳ ಸಂಚಿದೆಯೇ ಎಂಬ ಶಂಕೆ ಹುಟ್ಟುಹಾಕಿದೆ. ಅಷ್ಟೆ ಅಲ್ಲ, ಡಿ.ರಾಜಾ ಮತ್ತು ನ್ಯಾ.ಚಲಮೇಶ್ವರ್‌ ಭೇಟಿಯು ಕೇಂದ್ರ ಸರ್ಕಾರ ಹಾಗೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಕಾಂಗ್ರೆಸ್‌, ಎಡಪಕ್ಷಗಳು ಸೇರಿ ಹುನ್ನಾರ ನಡೆಸುತ್ತಿದೆಯೇ ಎಂಬ ಅನುಮಾನ ಹುಟ್ಟು ಹಾಕುವುದು ಸಹಜ.

ಕೆಟ್ಟ ಸಂಪ್ರದಾಯಕ್ಕೆ ನಾಂದಿ- ಅಶೋಕ್‌ ಹಾರನಹಳ್ಳಿ
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳೇ ನ್ಯಾಯಾಂಗದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದು ಆತಂಕಕಾರಿ ಬೆಳವಣಿಗೆ. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಮಾಡಿರುವ ಆರೋಪಗಳಿಗೆ ವ್ಯವಸ್ಥೆಯೊಳಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿತ್ತು. ಆದರೆ, ಮಾಧ್ಯಮಗಳ ಮೂಲಕ ಜನರಿಗೆ ಗೊತ್ತಾಗುವಂತೆ ಮಾಡಿದ್ದು ನ್ಯಾಯಮೂರ್ತಿಗಳು ಇಟ್ಟ ದೊಡ್ಡ ತಪ್ಪು ಹೆಜ್ಜೆ. ಆ ಮೂಲಕ ನ್ಯಾಯಾಂಗದ ತಳಹದಿಯನ್ನೇ ಅಲುಗಾಡಿಸಿದ್ದಾರೆ.

ದೇಶದ ಹಿತಕ್ಕಾಗಿ ನಾವು ವಿಷಯ ಬಹಿರಂಗಪಡಿಸಿದ್ದೇವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದರೂ ಅದರ ಪರಿಣಾಮ ಮಾತ್ರ ತದ್ವಿರುದ್ಧವಾಗಿದೆ. ವ್ಯವಸ್ಥೆಯಲ್ಲಿ ತಪ್ಪಾಗಿಲ್ಲ ಎಂದು ಹೇಳುವುದಿಲ್ಲ. ಆದರೆ, ನ್ಯಾಯಮೂರ್ತಿಗಳೇ ಈ ರೀತಿ ನ್ಯಾಯಾಂಗದ ಆಂತರಿಕ ವಿಚಾರಗಳನ್ನು ಪತ್ರಿಕಾಗೋಷ್ಠಿ ಮೂಲಕ ಬಹಿರಂಗಪಡಿಸಿ ಇತರೆ ನ್ಯಾಯಮೂರ್ತಿಗಳೂ ಅಂತಹ ಹಾದಿ ಹಿಡಿಯುವ ಸಂಪ್ರದಾಯ ಹುಟ್ಟಿಕೊಳ್ಳಬಹುದು ಎಂಬ ಆತಂಕ ಉಂಟಾಗಿದೆ. ಈ ಮೂಲಕ ಇತರೆ ನ್ಯಾಯಮೂರ್ತಿಗಳಿಗೆ ಅವರು ತಪ್ಪು ದಾರಿ ತೋರಿಸಿದ್ದಾರೆ.

ಸಿಜೆ ರಾಜಿನಾಮೆ ನೀಡಬೇಕು- ಪ್ರೊ.ರವಿವರ್ಮ ಕುಮಾರ್‌
ಇಂತಹ ಘಟನೆ ನಡೆಯಬಾರದಿತ್ತು. ಆದರೆ, ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸಿದ ಪತ್ರ ಎರಡು ತಿಂಗಳ ಹಿಂದೆ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವಂತಹದ್ದು. ಅದರೆ, ಪತ್ರ ಬರೆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸತ್ಯ. ಸುಪ್ರೀಂ ಕೋರ್ಟ್‌ ಕೊಲೀಜಿಯಂನ ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳು ಸೇರಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಅವಕಾಶವಿಲ್ಲ. ನಾಲ್ವರು ನ್ಯಾಯಮೂರ್ತಿಗಳು ಕೊಲೀಜಿಯಂನ ಐದನೇ ನ್ಯಾಯಮೂರ್ತಿ ವಿರುದ್ಧ ಆರೋಪ ಮಾಡಿರುವುದರಿಂದ ತಕ್ಷಣ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.

ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮೇಲೆ ಮಾಡಿರುವ ಆರೋಪಗಳನ್ನು ತಳ್ಳಿಹಾಕಬಹುದು. ಆದರೆ, ಇದರಿಂದ ನ್ಯಾಯಾಂಗದ ಮೇಲೆ ಇರುವ ಗೌರವ ಮತ್ತಷ್ಟು ಕಡಿಮೆಯಾಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next