ನವದೆಹಲಿ:ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲಾ ಹದಿನೆಂಟು ಮರುಪರಿಶೀಲನಾ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್ ನ ಪಂಚಸದಸ್ಯ ಪೀಠ ಗುರುವಾರ ವಜಾಗೊಳಿಸಿದೆ.
ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ 18 ಮೇಲ್ಮನವಿಯನ್ನು ಇಂದು ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ ನೇತೃತ್ವದ ಪಂಚಸದಸ್ಯ ಪೀಠ ಗೌಪ್ಯ ವಿಚಾರಣೆ ನಡೆಸಿತ್ತು.
ಪಂಚಸದಸ್ಯ ಪೀಠದಲ್ಲಿ ಸಿಜೆಐ ಎಸ್ ಎ ಬೋಬ್ಡೆ, ಜಸ್ಟೀಸ್ ಗಳಾದ ಡಿವೈ ಚಂದ್ರಾಚೂಡ್, ಅಶೋಕ್ ಭೂಷಣ್, ಎಸ್ ಎ ನಝೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡಿದೆ.
ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ ಸೇರಿದಂತೆ ಹದಿನೆಂಟು ಪಾರ್ಟಿಗಳು ಅಯೋಧ್ಯೆ ತೀರ್ಪಿನ ಕುರಿತು ಮರುಪರಿಶೀಲನಾ ಮೇಲ್ಮನವಿ ಸಲ್ಲಿಸಿದ್ದವು. ಆದರೆ ಅಯೋಧ್ಯೆ ಕುರಿತ ಅಂತಿಮ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಪಂಚಸದಸ್ಯ ಪೀಠ ತಿಳಿಸಿದೆ. ಇದರೊಂದಿಗೆ ಅಯೋಧ್ಯೆ ಭೂವಿವಾದ ಕುರಿತ ಕಾನೂನು ಸಮರ ಅಂತ್ಯಕಂಡಂತಾಗಿದೆ.
ರಾಮಜನ್ಮಭೂಮಿ-ಬಾಬ್ರಿ ಮಸೀದಿಯ 2.77 ಎಕರೆ ಭೂವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್ 9ರಂದು ಸುಪ್ರೀಂಕೋರ್ಟ್ ಸಿಜೆಐ ಜಸ್ಟೀಸ್ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ, ಅಯೋಧ್ಯೆ ರಾಮಜನ್ಮಭೂಮಿಯಾಗಿದ್ದು, ಇಲ್ಲಿಯೇ ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಸಮಿತಿ ರಚಿಸಬೇಕು. ಅಲ್ಲದೇ ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ಕಟ್ಟಲು ಅಯೋಧ್ಯೆಯಲ್ಲಿ 5 ಎಕರೆ ಜಾಗ ನೀಡಬೇಕೆಂದು ಒಮ್ಮತದ ತೀರ್ಪನ್ನು ನೀಡಿತ್ತು.