ಹೊಸದಿಲ್ಲಿ /ತಂಜಾವೂರು: ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಸೂಕ್ತ ವ್ಯವಸ್ಥೆ ಮಾಡದ ಕೇಂದ್ರ ಸರಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮೇ 3ರೊಳಗೆ ಕರಡು ವ್ಯವಸ್ಥೆ ರೂಪಿಸುವಂತೆ ಸೂಚಿಸಿದೆ. ಇದರ ಜತೆಗೆ ಮೇ 3ರ ವರೆಗೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ತಮಿಳುನಾಡು, ಕರ್ನಾಟಕ ಸಹಿತ ಎಲ್ಲ ರಾಜ್ಯ ಸರಕಾರಗಳಿಗೆ ಅದು ಖಡಕ್ಕಾಗಿ ಸೂಚಿಸಿದೆ. ಈ ಮೂಲಕ ಶಾಂತಿ ಕದಡದಂತೆ ತಮಿಳುನಾಡಿಗೆ ನೇರವಾಗಿಯೇ ಎಚ್ಚರಿಕೆ ನೀಡಿದೆ.
ಕೇಂದ್ರ ಸರಕಾರದ ಮೂರು ತಿಂಗಳ ಕಾಲಾ ವ ಕಾಶದ ಅರ್ಜಿ ಮತ್ತು ತಮಿಳುನಾಡಿನ ನ್ಯಾಯಾಂಗ ನಿಂದನೆ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ಮುಖ್ಯ ನ್ಯಾ| ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಮೇ 3ರ ವರೆಗೆ ಗಡುವು ನೀಡಿದೆ. ಈಗಾಗಲೇ ನೀರು ಹಂಚಿಕೆ ಬಗ್ಗೆ ಕೋರ್ಟ್ ತೀರ್ಪು ಕೊಟ್ಟಾಗಿದೆ. ನಿಮ್ಮ ಕಡೆಯಿಂದ ಹಂಚಿಕೆ ಯಾವ ರೀತಿ ಆಗಬೇಕು ಎಂಬುದಷ್ಟೇ ಬಾಕಿ ಉಳಿದಿದೆ. ಇದನ್ನು ಮಾಡಲು ತಡವೇಕೆ ಎಂದು ಕೇಂದ್ರ ಸರಕಾರಕ್ಕೆ ಅದು ಝಾಡಿಸಿದೆ.
ಮುಖ್ಯ ನ್ಯಾಯಮೂರ್ತಿಗಳ ಜತೆ ಪೀಠದಲ್ಲಿದ್ದ ನ್ಯಾ| ಎಂ. ಎಂ. ಖಾನ್ವಿಲ್ಕರ್ ಮತ್ತು ನ್ಯಾ| ಡಿ.ವೈ. ಚಂದ್ರ ಚೂಡ್ ಅವರೂ ಈ ಹಿಂದೆ ನಾವು ನೀಡಿ ರುವ ತೀರ್ಪನ್ನು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಅನುಸರಿಸಲೇ ಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಈಗಾಗಲೇ ನದಿ ನೀರಿನ ಹಂಚಿಕೆ ಬಗ್ಗೆ ತೀರ್ಪು ಕೊಟ್ಟಿದ್ದೇವೆ. ಆದರೆ ಯಾವ ರೀತಿ ಹಂಚಿಕೆಯಾಗಬೇಕು ಎಂಬುದಷ್ಟೇ ಬಾಕಿ ಉಳಿದಿದ್ದು, ಅದೂ ಸದ್ಯದಲ್ಲೇ ಆಗುತ್ತದೆ. ಅಲ್ಲಿಯವರೆಗೆ ಎಲ್ಲ ರಾಜ್ಯಗಳು ಶಾಂತಿಯಿಂದ ವರ್ತಿಸಬೇಕು ಎಂದು ಸೂಚಿಸಿದ್ದಾರೆ.
ನಿಗದಿತ ಸಮಯದಲ್ಲಿ ಕರಡು ಸಲ್ಲಿಕೆ: ಕರಡು ನಿಯಮಗಳನ್ನು ಸಲ್ಲಿಕೆ ಮಾಡಿ ಸುಪ್ರೀಂ ಕೋರ್ಟ್ ನಲ್ಲಿ ಮತ್ತೂಂದು ದೀರ್ಘ ಕಾಲದ ಕಾನೂನು ಸಮರಕ್ಕೆ ದಾರಿ ಮಾಡಿ ಕೊಟ್ಟಿತು ಎಂಬ ತಮಿಳುನಾಡು ಪರ ವಕೀಲರ ಸಂಶಯಗಳನ್ನು ಮುಖ್ಯ ನ್ಯಾಯಮೂರ್ತಿಗಳು ಒಪ್ಪಲಿಲ್ಲ. ನಿಗದಿತ ಸಮಯದಲ್ಲಿಯೇ ಕೇಂದ್ರ ಸರಕಾರ ಕರಡು ನಿಯಮಗಳನ್ನು ಸಲ್ಲಿಕೆ ಮಾಡಲಿದೆ. ಅದನ್ನು ಸುಪ್ರೀಂ ಕೋರ್ಟ್ ಒಪ್ಪುವ ಮೊದಲು ಸಂಬಂ ಧಿತ ರಾಜ್ಯ ಸರಕಾರಗಳ ಗಮನಕ್ಕೆ ತರಲಿದೆ ಎಂದು ಮುಖ್ಯ ನ್ಯಾಯ ಮೂರ್ತಿ ಗಳು ಹೇಳಿದ್ದಾರೆ.
ಈ ಮಧ್ಯೆ, ತೀರ್ಪಿನಲ್ಲಿನ ಸ್ಕೀಂ ಪದದ ಬಗ್ಗೆ ಅಟಾರ್ನಿ ಜನ ರಲ್ ಕೆ.ಕೆ. ವೇಣುಗೋಪಾಲ್ ಪೀಠದ ಮುಂದೆ ಸ್ಪಷ್ಟನೆ ಕೋರಿದರು. ಆದರೆ ನ್ಯಾಯ ಮೂರ್ತಿಗಳು ತೀರ್ಪಿನಲ್ಲೇ ಉಲ್ಲೇಖವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಮಿಳುನಾಡಿನ ವಕೀಲರು ಸ್ಕೀಂ ಎಂದರೇ ನಿರ್ವಹಣಾ ಮಂಡಳಿ ಅಲ್ಲವೇ ಎಂದು ಪ್ರಶ್ನಿಸಿದಾಗ ಮುಖ್ಯ ನ್ಯಾಯ ಮೂರ್ತಿಗಳು ಹೌದು ಎಂದಷ್ಟೇ ಹೇಳಿದರು.
ಐಪಿಎಲ್ ವಿರುದ್ಧ ಪ್ರತಿಭಟನೆ: ಕಾವೇರಿ ಮಂಡಳಿ ರಚನೆ ವಿಚಾರ ಮಂಗಳವಾರ ಚೆನ್ನೈಯಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೂ ಕರಾಳ ಛಾಯೆ ಬೀರಿದೆ. ತಮಿಳು ಪರ ಸಂಘಟನೆಗಳು ಎಂ.ಎ. ಚಿದಂಬರಂ ಸ್ಟೇಡಿಯಂ ಬಳಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ. ತಮಿಳುನಾಡಿನ ರಾಜಕೀಯ ಪಕ್ಷಗಳು ಕೂಡ ಐಪಿಎಲ್ ಪಂದ್ಯ ವಿರುದ್ಧ ಈಗಾಗಲೇ ಆಕ್ಷೇಪ ಮಾಡಿವೆ.
ಕಾವೇರಿಗಾಗಿ ಸ್ಟಾಲಿನ್ ನಡಿಗೆ: ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಕೂಡಲೇ ರಚಿಸ ಬೇಕು ಎಂದು ಒತ್ತಾಯಿಸಿ ತಮಿಳುನಾಡಿನ ವಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್ ತಂಜಾವೂರಿನಲ್ಲಿ ಪಾದಯಾತ್ರೆ ಮುಂದುವರಿಸಿದ್ದಾರೆ. ಈ ಪ್ರತಿಭಟನೆ ರಾಜಕೀಯ ರಹಿತವಾಗಿದ್ದು, ತಮ್ಮ ಈ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಪಾದಯಾತ್ರೆಗೆ 9 ರಾಜಕೀಯ ಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದಾರೆ ಎಂದರು. ಪ್ರಧಾನಿ ಮೋದಿಯವರೇ ಮಂಡಳಿ ರಚಿಸಲು ವಿಳಂಬ ನೀತಿ ಅನುಸರಿಸುವಂತೆ ಸೂಚಿಸಿದ್ದಾರೆ ಎಂದು ಸ್ಟಾಲಿನ್ ದೂರಿದ್ದಾರೆ. ಉದ್ದೇಶ
ಪೂರ್ವಕವಾಗಿಯೇ ಇಂಥ ಕ್ರಮ ಅನುಸರಿಸಲಾಗುತ್ತದೆ ಎನ್ನುವುದು ಸ್ಟಾಲಿನ್‌ರ ಆರೋಪ.