ನವದೆಹಲಿ: ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧ ದೂರುಗಳು ಸಲ್ಲಿಕೆಯಾಗುತ್ತಲೇ ಇರುತ್ತವೆ. ಆದರೆ ಕೇಂದ್ರ ಸರ್ಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಅವರ ಸೇವಾವಧಿಯಲ್ಲಿನ ವಿಚಾರಗಳನ್ನು ಮಾತ್ರ ಪರಿಗಣಿಸುತ್ತದೆ ಎಂದು ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಗುರುವಾರ “ಸುಪ್ರೀಂಕೋರ್ಟ್‌ನ ಕೆಲವು ನಿವೃತ್ತ ನ್ಯಾಯಮೂರ್ತಿಗಳು ಭಾರತ ವಿರೋಧಿ ಗುಂಪಿಗೆ ಸೇರಿಕೊಂಡಿದ್ದಾರೆಯೇ’ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಇದರ ಜತೆಗೆ ಸಚಿವರಿಗೆ ಯಾವ ಮೂಲದಿಂದ ಮಾಹಿತಿ ಲಭ್ಯವಾಗುತ್ತದೆ ಎಂದೂ ಪ್ರಶ್ನಿಸಲಾಗಿತ್ತು. ಜತೆಗೆ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮಾಹಿತಿ ನೀಡಲಾಗಿದೆಯೇ ಎಂದು ಪ್ರಶ್ನಿಸಲಾಗಿದೆ.
ಗಮನಾರ್ಹ ವಿಚಾರವೆಂದರೆ ಇಂಗ್ಲಿಷ್‌ನಲ್ಲಿ ನೀಡಲಾಗಿರುವ ಉತ್ತರದಲ್ಲಿ ಕೇಳಲಾಗಿರುವ ನಾಲ್ಕು ಉಪ- ಪ್ರಶ್ನೆಗೆ ರಿಜಿಜು ಉತ್ತರ ನೇರ ಉತ್ತರ ನೀಡಿರಲಿಲ್ಲ. ಆದರೆ, ಹಿಂದಿಯಲ್ಲಿ ನೀಡಲಾಗಿರುವ ಉತ್ತರದಲ್ಲಿ ಇಲ್ಲ ಎಂದು ಹೇಳಿದ್ದಾರೆ.