Advertisement

ಚುನಾವಣೆಗೆ ಮುನ್ನವೇ ಅಯೋಧ್ಯೆ ತೀರ್ಪು ಪ್ರಕಟ ಸಾಧ್ಯತೆ

05:30 AM Sep 28, 2018 | Karthik A |

ಹೊಸದಿಲ್ಲಿ: ಮುಂದಿನ ತಿಂಗಳ 29ರಿಂದ ಅಯೋಧ್ಯೆಯ ಮುಖ್ಯ ಪ್ರಕರಣದ ವಿಚಾರಣೆ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠದಲ್ಲಿ ಶುರುವಾಗಲಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ, 2019ರ ಲೋಕಸಭೆ ಚುನಾವಣೆಗೆ ಮುನ್ನವೇ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದದ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್‌ ಪ್ರಕಟಿಸಲಿದೆಯೇ ಎಂಬ ವಿಶ್ಲೇಷಣೆ ಕೆಲವೊಂದು ಆಂಗ್ಲ ಸುದ್ದಿವಾಹಿನಿಗಳಲ್ಲಿ ನಡೆದಿದೆ.

Advertisement

2014ರಲ್ಲಿ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಾಗ್ಧಾನದ ಜತೆಗೆ ಚುನಾವಣೆ ಎದುರಿಸಿತ್ತು. ಅದೇ ವಿಚಾರ ಮುಂದಿನ ಚುನಾವಣೆಯಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ‘ನ್ಯೂಸ್‌ 18’ ಸುದ್ದಿವಾಹಿನಿ ವರದಿ ಮಾಡಿದೆ. ಅದಕ್ಕೆ ಪೂರಕವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್‌ ಕುಮಾರ್‌ ಶೀಘ್ರವೇ ಪ್ರಕರಣ ಇತ್ಯರ್ಥವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಉಮಾಭಾರತಿ ಕೂಡ ಶೀಘ್ರದಲ್ಲಿಯೇ ಅಂತಿಮ ತೀರ್ಪು ಪ್ರಕಟವಾಗಬೇಕು ಎಂದು ಹೇಳಿದ್ದಾರೆ.

ಇನ್ನು ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯನ್‌ ಸ್ವಾಮಿ ಮಾಧ್ಯಮಗಳ ಜತೆಗೆ ಮಾತನಾಡುವ ವೇಳೆ, ವಿಚಾರಣೆ ಮುಂದೂಡಿಕೆ ಸೇರಿ ದೀರ್ಘ‌ವೆಂದರೆ ಒಂದು ತಿಂಗಳಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯವಾಗಬೇಕು ಎಂದು ಹೇಳಿಕೊಂಡಿದ್ದಾರೆ. ಇನ್ನು ‘ರಿಪಬ್ಲಿಕ್‌ ಟಿವಿ’ ಕೂಡ 1994ರ ತೀರ್ಪನ್ನು ಮರು ವಿಮರ್ಶೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವ ಕಾರಣ ಮುಂದಿನ ಲೋಕಸಭೆ ಚುನಾವಣೆ ಒಳಗಾಗಿಯೇ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದೆ.

2010ರ ತೀರ್ಪು ಏನು?
ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿ-ಬಾಬರಿ ಮಸೀದಿ ಇರುವ 2.77 ಎಕರೆ ಜಮೀನನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ ಲಲ್ಲಾಗೆ ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧವೂ ಸುಪ್ರೀಂಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ತೀರ್ಮಾನ ನಮ್ಮ ಪರ
ತೀರ್ಪಿನ ಬಗ್ಗೆ ಮುಸ್ಲಿಂ ಸಂಘಟನೆಗಳು ಸಂತಸ ವ್ಯಕ್ತಪಡಿಸಿ, ‘ಕೋರ್ಟ್‌ ತೀರ್ಮಾನ ನಮ್ಮ ಪರ’ ಎಂದು ಹೇಳಿಕೊಂಡಿವೆ. ಅರ್ಜಿದಾರದಲ್ಲಿ ಒಬ್ಬರಾಗಿರುವ ಮೌಲಾನಾ ಮಫ‌ುಜುರ್‌ ರೆಹಮಾನ್‌ ಪ್ರತಿಕ್ರಿಯೆ ನೀಡಿ, 1994ರ ತೀರ್ಪು ಜಮೀನು ವಶಪಡಿಸಿಕೊಂಡದ್ದಕ್ಕೆ ಸಂಬಂಧಪಟ್ಟದ್ದು. ಮಸೀದಿ ಇಸ್ಲಾಂನ ಭಾಗವಲ್ಲ ಎಂದು ಹೇಳಿದೆ. ಇದೀಗ ಸುಪ್ರೀಂಕೋರ್ಟ್‌ ಕೇವಲ ಸ್ಥಳದ ಒಡೆತನ ಯಾರಿಗೆ ಎಂಬ ಬಗ್ಗೆ ಮಾತ್ರ ವಿಚಾರಣೆ ನಡೆಸಲಿದೆ. ಹೀಗಾಗಿ, ನಮ್ಮ ಗುರಿ ಈಡೇರಿದೆ ಎಂದು ಹೇಳಿಕೊಂಡಿದ್ದಾರೆ. ಸುನ್ನಿ ಸೆಂಟ್ರಲ್‌ ವಕ್ಫ್ ಮಂಡಳಿಯ ಇಕ್ಬಾಲ್‌ ಅನ್ಸಾರಿ, ಸುಪ್ರೀಂಕೋರ್ಟ್‌ ಕೇವಲ ಪ್ರಕರಣದ ಪ್ರಾಮುಖ್ಯತೆ, ಜಮೀನು ಯಾರಿಗೆ ಸೇರಬೇಕು ಎಂಬ ವಾದ ಆಧರಿಸಿ ವಿಚಾರಣೆ ನಡೆಸುವುದಾಗಿ ಹೇಳಿರುವುದು ಸ್ವಾಗತಾರ್ಹ ಎಂದಿದ್ದಾರೆ.

Advertisement

ಆರ್‌ಎಸ್‌ಎಸ್‌ ಸ್ವಾಗತ
ಅ.29ರಿಂದ ಅಯೋಧ್ಯೆ ಪ್ರಕರಣದ ಮುಖ್ಯ ವಿಚಾರಣೆ ನಡೆಸುವ ತೀರ್ಮಾನ ಪ್ರಕಟಿಸಿರುವುದು ಶ್ಲಾಘನೀಯ ಎಂದು ಆರ್‌ಎಸ್‌ಎಸ್‌ ಹೇಳಿದೆ. ಶೀಘ್ರವೇ ನ್ಯಾಯಪೀಠದಿಂದ ಸೂಕ್ತ ತೀರ್ಪು ಹೊರಬೀಳುವ ವಿಶ್ವಾಸವಿದೆ ಎಂದಿದೆ. ‘ಟೈಮ್ಸ್‌ ನೌ’ ಜತೆಗೆ ಮಾತನಾಡಿದ ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್‌ ಕುಮಾರ್‌, ‘ನ್ಯಾಯಾಂಗ ಉತ್ತಮ ನಿರ್ಧಾರ ಕೈಗೊಳ್ಳಲಿದೆ. ಕಾಂಗ್ರೆಸ್‌ ಇಂಥ ವಿಚಾರಗಳನ್ನು ಜೀವಂತ ಇಡಲು ಬಯಸುತ್ತಿದೆ. ತ್ರಿವಳಿ ತಲಾಖ್‌ ವಿಚಾರದಲ್ಲಿ ಭಾರತದ  ನಿರ್ಧಾರಕ್ಕೆ  ಜಗತ್ತು ಶ್ಲಾ ಸುತ್ತಿವೆ. ಮುಸ್ಲಿಂ ಸಮುದಾಯದ 8.5 ಕೋಟಿ ಮಹಿಳೆಯರು ಅನ್ಯಾಯಕ್ಕೆ ಒಳಗಾಗಿದ್ದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.  ಅಯೋಧ್ಯೆ ವಿಚಾರವನ್ನು ಶೀಘ್ರವೇ ತೀರ್ಮಾನಿಸಿ 2018ರಲ್ಲಿ ಇತಿಹಾಸ ನಿರ್ಮಾಣವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದಿದ್ದಾರೆ.

ಇಂದು ಮನವಿ ಸಲ್ಲಿಕೆ: ಡಾ.ಸ್ವಾಮಿ
ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯನ್‌ ಸ್ವಾಮಿ ಅಯೋಧ್ಯೆ ಪ್ರಕರಣವನ್ನು ಶೀಘ್ರವೇ ವಿಚಾರಣೆಗೆ ಅಂಗೀಕರಿಸಬೇಕು ಎಂದು ಕೋರಿ ಶುಕ್ರವಾರ  ಸುಪ್ರೀಂಗೆ ಮನವಿ ಸಲ್ಲಿಸಲಿದ್ದಾರೆ. ‘ಅಯೋಧ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಮೂಲಭೂತ ಹಕ್ಕು ಎಂಬ ಬಗ್ಗೆ ಮೇಲ್ಮನವಿ ಸಲ್ಲಿಸಲಿದ್ದೇನೆ.  ಸುನ್ನಿ ವಕ್ಫ್ ಮಂಡಳಿ ಅದಕ್ಕೆ ಯುಕ್ತ ಕಂಡಂತೆ ನಡೆದುಕೊಳ್ಳಬಹುದು’ ಎಂದು ಹೇಳಿದ್ದಾರೆ. ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಜಯ ಅಲ್ಲ. ಅಂತಿಮ ತೀರ್ಪು ಹೊರಬರಲು ದಾರಿ ಎಂದು ಹೇಳಿದ್ದಾರೆ. ಸುನ್ನಿ ವಕ್ಫ್ ಮಂಡಳಿ ಪ್ರತಿಪಾದಿಸುತ್ತಿರುವುದು ಭೂಮಿಯ ಮಾಲೀಕತ್ವದ ವಿಷಯ ಮಾತ್ರ. ನಾವು ರಾಮಲಲ್ಲಾ ಇರುವ ಪ್ರದೇಶದಲ್ಲೇ ಶ್ರೀರಾಮ ಹುಟ್ಟಿದ್ದು, ಅಲ್ಲೇ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರುತ್ತಿದ್ದೇವೆ’ ಎಂದಿದ್ದಾರೆ.

ಇಂದು ಶಬರಿಮಲೆ ವಿವಾದ, ಭೀಮಾ-ಕೊರೆಗಾಂವ್‌ ತೀರ್ಪು
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಶುಕ್ರವಾರ ಮತ್ತೆರಡು ಪ್ರಕರಣಗಳ ತೀರ್ಪನ್ನು ಪ್ರಕಟಿಸಲಿದೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತ ತೀರ್ಪನ್ನು ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಪ್ರಕಟಿಸಲಿದೆ. 8 ದಿನಗಳ ಕಾಲ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಆಗಸ್ಟ್‌ 1ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದೇ ವೇಳೆ, ಭೀಮಾ-ಕೊರೆಗಾಂವ್‌ ಹಿಂಸಾಚಾರ ಪ್ರಕರಣ ಹಾಗೂ ಪ್ರಧಾನಿ ಮೋದಿ ಹತ್ಯೆ ಸಂಚು ಆರೋಪದಲ್ಲಿ ಐವರು ಹೋರಾಟಗಾರರನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಇತಿಹಾಸಕಾರ್ತಿ ರೊಮಿಳಾ ಥಾಪರ್‌ ಸಲ್ಲಿಸಿರುವ ಅರ್ಜಿಯ ತೀರ್ಪು ಕೂಡ ಶುಕ್ರವಾರ ಪ್ರಕಟವಾಗುವ ಸಾಧ್ಯತೆಯಿದೆ.

ಹಿನ್ನೋಟ
1994:
ಸುಪ್ರೀಂಕೋರ್ಟ್‌ನಿಂದ ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ತೀರ್ಪು

2002: ವಿವಾದಾತ್ಮಕ ಸ್ಥಳ ಯಾರಿಗೆ ಸೇರಿದ್ದು ಎಂಬ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ನಿಂದ ವಿಚಾರಣೆ ಶುರು

2003: ಅಸ್ಲಾಂ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ಥಳದಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಸುಪ್ರೀಂಕೋರ್ಟ್‌ ನಿಷೇಧ

2010: ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸಿ ಹೈಕೋರ್ಟ್‌ ತೀರ್ಪು

2017: ಆಗಿನ ಸುಪ್ರೀಂಕೋರ್ಟ್‌ ಮು.ನ್ಯಾ|ಜೆ.ಎಸ್‌.ಖೆಹರ್‌ರಿಂದ ಕೋರ್ಟ್‌ ಹೊರಭಾಗದಲ್ಲಿ ವಿವಾದ ಇತ್ಯರ್ಥಕ್ಕೆ ಸಲಹೆ

ಎಲ್ಲರೂ ಕೂಡ ಸುಪ್ರೀಂಕೋರ್ಟ್‌ ತೀರ್ಪನ್ನು ಪಾಲಿಸಬೇಕು. ಬಿಜೆಪಿ ಮಾತ್ರ ಅಯೋಧ್ಯೆ ವಿಚಾರದಲ್ಲಿ ಎಲ್ಲರನ್ನೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
– ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್‌ ವಕ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next