Advertisement

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

03:12 PM Apr 18, 2024 | Team Udayavani |

ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು, ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣಾ ಪ್ರಕ್ರಿಯೆಯ ಕುರಿತು ಅನುಸರಿಸುವ ಕ್ರಮಗಳ ವಿವರಿಸಬೇಕು ಎಂದು ಸುಪ್ರೀಂಕೋರ್ಟ್‌ ಗುರುವಾರ (ಏ.18) ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

Advertisement

ಇದನ್ನೂ ಓದಿ:CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

ಇದು ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ ಚುನಾವಣಾ ಪ್ರಕ್ರಿಯೆಯಾಗಿದೆ. ಇದರಲ್ಲಿ ಪಾರದರ್ಶಕತೆ ಇರಬೇಕು. ಈ ಪ್ರಕ್ರಿಯೆಯಲ್ಲಿ ನಿರೀಕ್ಷಿತವಾದದ್ದನ್ನು ಮಾಡಲಾಗುತ್ತಿಲ್ಲ ಎಂಬ ಆತಂಕ ಯಾರಿಗೂ ಬೇಡ ಎಂದು ಜಸ್ಟೀಸ್‌ ಸಂಜೀವ್‌ ಖನ್ನಾ ಮತ್ತು ಜಸ್ಟೀಸ್‌ ದೀಪಂಕರ್‌ ದತ್ತ ಅವರನ್ನೊಳಗೊಂಡ ಪೀಠ ತಿಳಿಸಿದೆ.

ವಿವಿಪ್ಯಾಟ್‌ ವ್ಯವಸ್ಥೆಯ ಮೂಲಕ ಹೊರಬರುವ ಪೇಪರ್‌ ಸ್ಲಿಪ್‌ ಗಳೊಂದಿಗೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ದಲ್ಲಿ ಚಲಾವಣೆಯಾದ ಮತಗಳ ಅಡ್ಡ ಪರಿಶೀಲನೆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಡೆಸಿತು,

ಚುನಾವಣಾ ಆಯೋಗದ ಪರ ಹಿರಿಯ ವಕೀಲರಾದ ಮಣಿಂದರ್‌ ಸಿಂಗ್‌ ಮತ್ತು ಚುನಾವಣಾ ಅಧಿಕಾರಿಗಳು ಸುಪ್ರೀಂಕೋರ್ಟ್‌ ಗೆ ಹಾಜರಾಗಿದ್ದು, ಪ್ರಶ್ನೆಗಳಿಗೆ ಉತ್ತರಿಸಿರುವುದಾಗಿ ವರದಿ ತಿಳಿಸಿದೆ.

Advertisement

ಅರ್ಜಿದಾರರ ಪರ ಹಾಜರಾಗಿದ್ದ ವಕೀಲರಲ್ಲಿ ಒಬ್ಬರಾದ ನಿಜಾಂ ಪಾಶಾ ಅವರು, ಮತದಾರ ಮತದಾನ ಮಾಡಿದ ನಂತರ ವಿವಿಪ್ಯಾಟ್‌ ಸ್ಲಿಪ್‌ ಪಡೆಯಲು ಅವಕಾಶ ನೀಡಬೇಕು, ನಂತರ ಆ ಸ್ಲಿಪ್‌ ಅನ್ನು ಬ್ಯಾಲೆಟ್‌ ಬಾಕ್ಸ್‌ ನೊಳಗೆ ಹಾಕುವ ಅವಕಾಶ ಇರಬೇಕು ಎಂದು ವಾದ ಮಂಡಿಸಿದ್ದರು.

ಅದಕ್ಕೆ ಜಸ್ಟೀಸ್‌ ಖನ್ನಾ ಅವರು, ಒಂದು ವೇಳೆ ಈ ಪ್ರಕ್ರಿಯೆ ಮತದಾರನ ಖಾಸಗಿತನದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಮತದಾರನ ಖಾಸಗಿತನ ಬಳಸಿಕೊಂಡು ಮತದಾರನ ಹಕ್ಕನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಪಾಶಾ ಪ್ರತಿಕ್ರಿಯಿಸಿದರು.

ಹಿರಿಯ ವಕೀಲರಾದ ಪ್ರಶಾಂತ್‌ ಭೂಷಣ್‌, ಸಂಜಯ್‌ ಹೆಗ್ಡೆ ಕೂಡಾ ಸುಪ್ರೀಂಕೋರ್ಟ್‌ ನಲ್ಲಿ ಹಾಜರಿದ್ದರು. ಅಣಕು ಪ್ರದರ್ಶನದಲ್ಲಿ ಇವಿಎಂ ವ್ಯವಸ್ಥೆಯಲ್ಲಿ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವುದು ಕೇರಳದ ಫಲಿತಾಂಶದಲ್ಲಿ ಕಂಡುಬಂದಿರುವ ವರದಿ ಇದೆ ಎಂದು ಪ್ರಶಾಂತ್‌ ಭೂಷಣ್‌ ದೂರಿದಾಗ, ಇದೊಂದು ಸತ್ಯಕ್ಕೆ ದೂರವಾದ ವರದಿ ಎಂದು ಚುನಾವಣಾ ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಮತದಾನ ದಿನದಂದು ಎಲ್ಲಾ ಮತಕೇಂದ್ರದಲ್ಲೂ ಅಣಕು ಮತದಾನ ನಡೆಯುತ್ತದೆ. ಆ ಸಂದರ್ಭದಲ್ಲಿ ವಿವಿಪ್ಯಾಟ್‌ ಸ್ಲಿಪ್‌ ಗಳನ್ನು ಹೊರ ತೆಗೆದು ಎಣಿಕೆ ಮಾಡಲಾಗುತ್ತದೆ. ನಂತರ ಹೊಂದಾಣಿಕೆ ಮಾಡಲಾಗುತ್ತದೆ. ಎಲ್ಲಾ ಯಂತ್ರಗಳು ವಿವಿಧ ರೀತಿಯ ಕಾಗದದ ಸೀಲುಗಳನ್ನು ಹೊಂದಿರುತ್ತದೆ. ಯಂತ್ರಗಳನ್ನು ಎಣಿಕೆಗೆ ತರುವ ಸಮಯದಲ್ಲಿ ಸೀಲ್‌ ನಂಬರ್‌ ಗಳನ್ನು ಪರಿಶೀಲಿಸಲಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳು ಸುಪ್ರೀಂಕೋರ್ಟ್‌ ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಇವಿಎಂನಲ್ಲಿ ವಿವಿಪ್ಯಾಟ್‌ ಎರಡನೇ ಹಂತದ ವೆರಿಫಿಕೇಶನ್‌ ಪ್ರಕ್ರಿಯೆಯಾಗಿದೆ. ಮುಖ್ಯವಾಗಿ ಇವಿಎಂನಲ್ಲಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ ಎಂಬ ಆರೋಪ ಈಗ ಎದುರಿಸಲಾಗುತ್ತಿದೆ. ಆದರೆ ಮತಯಂತ್ರಗಳ ಪರಿಶೀಲನೆ ಅಧಿಕಾರ ಚುನಾವಣಾ ಅಧಿಕಾರಿಗಳಿಗೆ ಇದೆಯೇ ಹೊರತು ಮತದಾರರಿಗಲ್ಲ ಎಂದು ಚುನಾವಣಾ ಅಧಿಕಾರಿಗಳು ಸುಪ್ರೀಂಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next