ನವದೆಹಲಿ:ವಿವಾದಿತ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತಡೆ ಹಿಡಿಯಲು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ(ಡಿಸೆಂಬರ್ 17, 2020) ಸೂಚಿಸಿದ್ದು, ರೈತ ಸಂಘಟನೆ ಹಾಜರಿಲ್ಲದ ಕಾರಣ ಅರ್ಜಿ ವಿಚಾರಣೆ ಮುಂದೂಡಿರುವುದಾಗಿ ತಿಳಿಸಿದೆ.
ಕೃಷಿ ಕಾಯ್ದೆ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ರೈತರು ಮತ್ತು ಸರ್ಕಾರದ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂಕೋರ್ಟ್ ಮತ್ತೆ ಪ್ರಸ್ತಾಪಿಸಿರುವುದಾಗಿ ವರದಿ ಹೇಳಿದೆ.
ರೈತರ ಸಂಘಟನೆ ಹಾಜರಿಲ್ಲದ ಕಾರಣ ರಜಾಕಾಲದ ಪೀಠ ಮುಂದಿನ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ ನೇತೃತ್ವದ ಪೀಠ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದೆ.
ವಿವಾದಿತ ಕೃಷಿ ಕಾಯ್ದೆಯನ್ನು ತಡೆಹಿಡಿಯಲು ಕೇಂದ್ರ ಸರ್ಕಾರ ಪರಿಗಣಿಸುವಂತೆ ಸಿಜೆಐ ಬೋಬ್ಡೆ ಕೇಂದ್ರ ಸರ್ಕಾರವನ್ನು ಕೇಳಿದ್ದು, ರೈತ ಸಂಘಟನೆಗಳಿಗೆ ನೋಟಿಸ್ ನೀಡುವಂತೆ ಹೇಳಿದರು. ಈವರೆಗೆ ಸರ್ಕಾರದ ಜತೆ ನಡೆಸಿದ ಮಾತುಕತೆಯಲ್ಲಿ ರೈತ ಸಂಘಟನೆಗಳು ಪಾಲ್ಗೊಂಡಿದ್ದು, ಎಲ್ಲಾ ರೈತ ಸಂಘಟನೆಯ ಪ್ರತಿನಿಧಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ಈ ಸಂದರ್ಭದಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ:ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಬಿದ್ದ ಸಿಮೆಂಟ್ ಕಂಬ : ಬೆಚ್ಚಿ ಬೀಳಿಸುತ್ತೆ ವಿಡಿಯೋ
ಸುಪ್ರೀಂಕೋರ್ಟ್ ಕಲಾಪಕ್ಕೆ ಚಳಿಗಾಲದ ರಜೆ ಇರುವ ನಿಟ್ಟಿನಲ್ಲಿ ರೈತ ಸಂಘಟನೆಗಳು ರಜಾಕಾಲದ ಪೀಠದ ಮುಂದೆ ವಿಚಾರಣೆಗೆ ಹಾಜರಾಗಲಿ ಎಂದು ತಿಳಿಸಿದೆ.
ಪ್ರತಿಭಟನೆ ರೈತರ ಹಕ್ಕು. ಕಾನೂನು ವಿರುದ್ಧ ಹೋರಾಡುವುದು ಮೂಲಭೂತ ಹಕ್ಕಾಗಿದೆ. ಇದರಲ್ಲಿ ಅವರ ಹಕ್ಕನ್ನು ಕಸಿಯುವ ಯಾವ ಪ್ರಶ್ನೆಯೂ ಇಲ್ಲ. ಆದರೆ ಪ್ರತಿಭಟನೆ ಜನಸಾಮಾನ್ಯರ ಜೀನವದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಬಾರದು ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.