ಹೊಸದಿಲ್ಲಿ: “ಶಿಕ್ಷಣ ಎನ್ನುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿರುವ ಸೇವೆಯೇ?’ ಇಂಥದ್ದೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಬಂದಿದೆ.
ಲಕ್ನೋದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಪರಿಶೀಲಿಸಲು ಸಮ್ಮತಿಸಿದೆ. ಜತೆಗೆ ಮತ್ತೊಂದು ಪ್ರಕರಣದಲ್ಲಿ ಇದೇ ರೀತಿಯ ವಿಚಾರವು ಇತ್ಯರ್ಥಕ್ಕೆ ಬಾಕಿಯಿದ್ದು, ಅದನ್ನೂ ಇದರ ಜತೆಗೆ ಸೇರಿಸಿ ಒಟ್ಟಿಗೇ ವಿಚಾರಣೆ ನಡೆಸುವುದಾಗಿ ಹೇಳಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಆದೇಶ ಹೊರಡಿಸಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ, “ಶೈಕ್ಷಣಿಕ ಸಂಸ್ಥೆಗಳು 1986ರ ಗ್ರಾಹಕ ರಕ್ಷಣ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ, ಈಜು ಸೇರಿದಂತೆ ಹಲವು ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡ ಶಿಕ್ಷಣವನ್ನು ಈ ಕಾಯ್ದೆಯನ್ವಯ “ಸೇವೆ’ ಎಂದು ಪರಿಗಣಿಸಲೂ ಆಗುವುದಿಲ್ಲ’ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಲಕ್ನೋ ನಿವಾಸಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ಅರ್ಜಿ ಪರಿಗಣಿಸಿರುವ ನ್ಯಾ| ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನಾ ಅವರನ್ನೊಳಗೊಂಡ ನ್ಯಾಯಪೀಠ, “ಶಿಕ್ಷಣವು ಗ್ರಾಹಕ ರಕ್ಷಣ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಸೇವೆಯೇ’ ಎಂದು ಪರಿಶೀಲಿಸಲು ಒಪ್ಪಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಅಫ್ಘಾನಿಸ್ಥಾನ ವಿರುದ್ಧ ಅಬ್ಬರಿಸಿದ ಭಾರತ
ಏನಿದು ಪ್ರಕರಣ?: ಅರ್ಜಿದಾರನ ಮಗ ಕಲಿಯುತ್ತಿರುವ ಶಾಲೆಯು 2007ರಲ್ಲಿ “ಬೇಸಗೆ ಶಿಬಿರ’ ಆಯೋಜಿಸಿತ್ತು. ಅಲ್ಲಿ, ಈಜು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು 1,000 ರೂ. ಶುಲ್ಕ ಪಾವತಿಸುವಂತೆ ಸೂಚಿಸಿತ್ತು. 2007ರ ಮೇ 28ರಂದು ಶಾಲೆಯಿಂದ ಅರ್ಜಿದಾರ ವ್ಯಕ್ತಿಗೆ ಕರೆ ಬಂದಿತ್ತು. “ನಿಮ್ಮ ಮಗ ಅಸ್ವಸ್ಥನಾಗಿದ್ದಾನೆ. ಕೂಡಲೇ ಬನ್ನಿ’ ಎಂದು ಹೇಳಿದ್ದರು. ಈಜುವ ವೇಳೆ ಬಾಲಕ ನೀರಿನಲ್ಲಿ ಮುಳುಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವನು ಅಸುನೀಗಿದ್ದ.
ಈ ಹಿನ್ನೆಲೆಯಲ್ಲಿ ರಾಜ್ಯ ಗ್ರಾಹಕ ಆಯೋಗದ ಮೊರೆ ಹೋಗಿದ್ದ ವ್ಯಕ್ತಿ, ಶಾಲೆಯ ನಿರ್ಲಕ್ಷ್ಯದಿಂದಾಗಿ ಮಗ ಸಾವನ್ನಪ್ಪಿದ್ದು, 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕೋರಿದ್ದರು. ಆದರೆ, ದೂರುದಾರನು “ಗ್ರಾಹಕ’ ಅಲ್ಲ ಎಂಬ ಕಾರಣ ಹೇಳಿ ಆಯೋಗವು ಅರ್ಜಿಯನ್ನು ವಜಾ ಮಾಡಿತ್ತು. ರಾಷ್ಟ್ರೀಯ ಆಯೋಗದ ಮೊರೆ ಹೋದಾಗ, ಅದು ಕೂಡ ರಾಜ್ಯ ಆಯೋಗದ ತೀರ್ಪನ್ನೇ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಸುಪ್ರೀಂ ಮೆಟ್ಟಿಲೇರಿದ್ದರು.