ನವದೆಹಲಿ:ಅಪರಾಧಿಗಳಿಗೆ ನೀಡಲಾಗಿರುವ ಶಿಕ್ಷೆಯನ್ನು ವಿಸ್ತರಿಸುವ ಮುನ್ನ ಅವರಿಗೂ ನೋಟಿಸ್ ನೀಡಿ, ಅವರ ವಾದವನ್ನೂ ಆಲಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ.
ಜತೆಗೆ ಈ ಬಗ್ಗೆ ರಾಜಸ್ಥಾನ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಹೈಕೋರ್ಟ್ ವ್ಯಕ್ತಿಯೊಬ್ಬನಿಗೆ ನೀಡಿದ್ದ ಶಿಕ್ಷೆಯನ್ನು ಆತನ ಜೀವನ ಪರ್ಯಂತದವರೆಗೆ ವಿಸ್ತರಿಸಿ ಆದೇಶ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅಪರಾಧಿಯು ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾ.ಬಿ.ಆರ್.ಗವಾಯಿ ಮತ್ತು ನ್ಯಾ.ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ, “ಹೈಕೋರ್ಟ್‌ಗಳು ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬಹುದಾದರೂ, ಶಿಕ್ಷೆಯನ್ನು ವಿಸ್ತರಿಸುವುದಕ್ಕೂ ಮೊದಲು ಅಪರಾಧಿಗೂ ನೋಟಿಸ್ ನೀಡಬೇಕು.
ಆತನಿಗೂ ತನ್ನ ಪರ ವಾದ ಮಂಡಿಸಲು ಅವಕಾಶ ಕಲ್ಪಿಸಬೇಕು. ಆದರೆ ಈ ಪ್ರಕರಣದಲ್ಲಿ ಆ ರೀತಿ ನಡೆದುಕೊಳ್ಳಲಾಗಿಲ್ಲ’ ಎಂದಿದೆ.
ಹೀಗಾಗಿ, ಶಿಕ್ಷೆಯ ವಿಸ್ತರಣೆ ಸಂದರ್ಭದಲ್ಲಿ ಅಪರಾಧಿಗಳ ಅಭಿಪ್ರಾಯಗಳನ್ನು ಹೈಕೋರ್ಟ್ ಕೇಳಬೇಕು.
ಹೀಗಾಗಿ, ಸದರಿ ವಿಚಾರದಲ್ಲಿ ಅರ್ಜಿದಾರರ ಅಭಿಪ್ರಾಯ ಕೇಳದೆ, ಹೈಕೋರ್ಟ್ ಶಿಕ್ಷೆಯನ್ನು ವಿಸ್ತರಿಸಿದ ಕ್ರಮ ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.