ಹೊಸದಿಲ್ಲಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಆಕ್ಷೇಪ ಮಾಡಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿಗೆ ಮೂರು ದಿನ ವಿಚಾರಣೆ ಮುಂದೂಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದ್ದು, ಪ್ರಕರಣವನ್ನು ನ್ಯಾಯಪೀಠ ಪರಿಶೀಲನೆ ನಡೆಸಬೇಕಾಗಿದೆ. ಹೀಗಾಗಿ ಹೈಕೋರ್ಟ್ ನ್ಯಾಯಮೂರ್ತಿ ಅವರಿಗೆ ಜು. 14ರ ವರೆಗೆ ವಿಚಾರಣೆ ಮುಂದೂಡಬೇಕು ಎಂದು ಸಲಹೆ ಮಾಡುತ್ತೇವೆ ಎಂದು ಹೇಳಿತು.
ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ದಳದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ ಸೋಮವಾರ ಕಟು ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಡೆಹಿಡಿಯ ಬಹುದಿತ್ತು ಎಂದರು. ನ್ಯಾ| ಎಚ್.ಪಿ. ಸಂದೇಶ್ ನೇತೃತ್ವದ ನ್ಯಾಯಪೀಠ ಮುಂದೆ ಇರುವ ಪ್ರಕರಣಗಳ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಅಥವಾ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಹೈಕೋರ್ಟ್‌ಗೆ
ವರ್ಗಾಯಿಸಬಹುದು ಎಂದು ಸಲಹೆ ನೀಡಿದರು.
ಸೀಮಂತ್ ಕುಮಾರ್ ಸಿಂಗ್ ಪರ ವಾದಿಸಿದ ನ್ಯಾಯವಾದಿ ಅಮಿತ್ ಕುಮಾರ್, ನನ್ನ ಕಕ್ಷಿದಾರರ ಬಗ್ಗೆ ಇರುವ ವಿವರಗಳನ್ನು ಕೋರ್ಟ್‌ನಲ್ಲಿ ಬಹಿರಂಗವಾಗಿ ಪ್ರಸ್ತಾವ ಮಾಡಲಾಗಿದೆ ಎಂದು ದೂರಿದರು.