Advertisement

ಚೀತಾಗಳ ಸಾವಿನ ಬಗ್ಗೆ ಸುಪ್ರೀಂ ಕಳವಳ

09:13 PM Jul 20, 2023 | Team Udayavani |

ನವದೆಹಲಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳು ಮೃತಪಡುತ್ತಿರುವ ಬಗ್ಗೆ ಸರ್ವೋಚ್ಚ ಪೀಠ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿರುವುದು ಏಕೆ ಎಂದು ಕೇಂದ್ರವನ್ನು ಪ್ರಶ್ನಿಸಿದೆ. ಕಳೆದ ವಾರ ಎರಡು ಚೀತಾಗಳ ಸಾವಿನ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ಬಿ.ಆರ್‌.ಗವಾಯ್‌, ನ್ಯಾ. ಜೆ.ಬಿ.ಪರ್ದಿವಾಲ ಮತ್ತು ನ್ಯಾ.ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿದ್ದ ನ್ಯಾಯಪೀಠ, ಚೀತಾಗಳ ಸಾವು ತಪ್ಪಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿತು.

Advertisement

“ಈ ಯೋಜನೆಗಾಗಿ ಸರ್ಕಾರ ಹಲವು ಉತ್ತಮ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಣಿಗಳನ್ನು ಹೊಸ ಜಾಗಗಳಿಗೆ ಸ್ಥಳಾಂತರಿಸಿದ ನಂತರ ಶೇ.50ರಷ್ಟು ಸಾವುಗಳು ಸಾಮಾನ್ಯ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಐಶ್ವರ್ಯ ಭಾಟಿ ಹೇಳಿದರು. ಈ ವಾತಾವರಣಕ್ಕೆ ಚೀತಾಗಳು ಸರಿಹೊಂದುವುದೇ? ಅಥವಾ ಮೂತ್ರಪಿಂಡ ಅಥವಾ ಉಸಿರಾಟದ ಸಮಸ್ಯೆ ಎದುರಿಸುತ್ತಿವೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಎಸ್‌ಜಿ, ಸೋಂಕಿನ ಕಾರಣದಿಂದ ಚೀತಾಗಳು ಮೃತಪಡುತ್ತಿವೆ ಎಂದು ತಿಳಿಸಿದರು.

ರಾಜಸ್ಥಾನದ ಒಂದು ಉದ್ಯಾನವನ ಚಿರತೆಗಳಿಗೆ ಪ್ರಸಿದ್ಧವಾಗಿದೆ. ಅಲ್ಲಿಗೆ ಈ ಚೀತಾಗಳನ್ನು ಸ್ಥಳಾಂತರಿಸುವ ಕುರಿತು ಸರ್ಕಾರ ಚಿಂತಿಸಬಹುದು ಎಂದು ಇದೇ ವೇಳೆ ನ್ಯಾಯಪೀಠ ಹೇಳಿತು.ಫೆ.18ರಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಯಿತು. ಇದಕ್ಕೂ ಮುನ್ನ 2022ರ ಸೆ.17ರಂದು ನಮೀಬಿಯಾದಿಂದ 8 ಚೀತಾಗಳು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next