Advertisement

ನೀರಾವರಿ ವಂಚಿತ ಗ್ರಾಮಗಳಿಗೆ ನೀರಾವರಿ ಕಲ್ಪಿಸಿ

11:45 AM Jan 12, 2019 | |

ಆಲಮಟ್ಟಿ: ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳ ಹಾಗೂ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನೀರಾವರಿ ವಂಚಿತ ಗ್ರಾಮಗಳಿಗೆ ಮುಳವಾಡ ಏತ ನೀರಾವರಿ ಹಂತ-3ರಲ್ಲಿ ನೀರಾವರಿಗೊಳಪಡಿಸಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘ ರಾಜ್ಯ ಘಟಕದ ವತಿಯಿಂದ ರೈತರು ಕೃಷ್ಣಾಭಾಗ್ಯಜಲ ನಿಗಮದ ಮುಖ್ಯ ಅಭಿಯಂತರರಿಗೆ ಮನವಿ ಹಾಗೂ ಜಾಲನಕ್ಷೆ ಸಲ್ಲಿಸಿದರು.

Advertisement

ಶುಕ್ರವಾರ ಮಧ್ಯಾಹ್ನ ಮನವಿ ಸಲ್ಲಿಸಿ ಮಾತನಾಡಿದ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಜಿ.ಎಸ್‌. ಬಗಲಿ ಅವರು, ಜಿಲ್ಲೆಯ ಆಲಮಟ್ಟಿಯಲ್ಲಿ ಬೃಹತ್‌ ಜಲಾಶಯ ನಿರ್ಮಿಸಿದ್ದರೂ ಕೂಡ ವಿಜಯಪುರ ಜಿಲ್ಲೆಯ ವಿಜಯಪುರ, ಬಬಲೇಶ್ವರ ಹಾಗೂ ಇಂಡಿ ತಾಲೂಕಿನ ಸುಮಾರು 62 ಗ್ರಾಮಗಳು ನೀರಾವರಿಯಿಂದ ವಂಚಿತಗೊಂಡಿದ್ದು ಅವುಗಳಿಗೆ ಮುಳವಾಡ ಏತ ನೀರಾವರಿ ಹಂತ-3ರಲ್ಲಿ ಕೂಡಲೇ ನೀರಾವರಿಗೊಳಪಡಿಸಿ ಕಾಲುವೆ ನಿರ್ಮಿಸಿ ರೈತರ ಜಮೀನುಗಳಿಗೆ ನೀರು ಕೊಡುವಂತಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ರೈತರ ಜಮೀನುಗಳಿಗೆ ಹಾಗೂ ವ್ಯಾಪ್ತಿಯ ಕೆರೆ ಹಾಗೂ ಬಾಂದಾರ್‌ ತುಂಬಲು ಅನುಕೂಲವಾಗುವಂತೆ ಯೋಜನೆ ಹಾಕಿಕೊಳ್ಳಬೇಕು. ಈ ಕುರಿತು ಹಲವಾರು ಬಾರಿ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರುಗಳಿಗೆ ಮನವಿ ಸಲ್ಲಿಸಿ ಈ ಯೋಜನೆಯಿಂದ ರೈತರಿಗಾಗುವ ಉಪಯೋಗದ ಕುರಿತು ಮನವರಿಕೆ ಮಾಡಲಾಗಿತ್ತು.

ಇದರಿಂದ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ ಜಲ ಸಂಪನ್ಮೂಲ ಇಲಾಖೆ ಮುಖ್ಯ ಕಾರ್ಯದರ್ಶಿಗಳು ತಮ್ಮ ಇಲಾಖೆ ಕೆಳಹಂತದ ಅಧಿಕಾರಿಗಳಿಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರೂ ಕೂಡ ಮುಖ್ಯ ಅಭಿಯಂತರುಗಳು ಸಂಬಂಧಿಸಿದ ಗ್ರಾಮಗಳಿಗೆ ಭೇಟಿ ನೀಡದೇ ಸತಾಯಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅಭಿಯಂತರರು, ನೀರಾವರಿಯಿಂದ ವಂಚಿತಗೊಂಡಿರುವ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಈ ಕುರಿತು ಗೊಂದಲಬೇಡ ಎಂದು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಮುದ್ದುಗೌಡ ಪಾಟೀಲ, ಎಸ್‌.ಟಿ. ತೆಲಸಂಗ, ಬೀರಪ್ಪ ಪೂಜಾರಿ, ಬಸವರಾಜ ಕುಂಬಾರ (ಕನಕನಾಳ), ಅಪ್ಪುಗೌಡ ಬಿರಾದಾರ, ರಾಜಶೇಖರ ದೊಡಮನಿ, ರಾಮಚಂದ್ರ ಮಹಿಂದ್ರಕರ, ಹಸನಸಾಬ ಇನಾಮದಾರ, ಕೆ.ಡಿ. ಅಗಸರ, ಶಿವರಾಯ ಕುಂಬಾರ ಹಾಗೂ ಜಿಗಜೇವಣಿ, ಕಾತ್ರಾಳ, ಕನಕನಾಳ, ಹಳಗುಣಕಿ, ಕಪನಿಂಬರಗಿ, ಕೋಳೂರಗಿ, ಗುಂದವಾನ, ಅತಾಲಟ್ಟಿ, ಇಂಚಗೇರಿ, ನಂದರಗಿ ಸೇರಿದಂತೆ 62 ಗ್ರಾಮಗಳಿಂದ ಆಗಮಿಸಿದ್ದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next