ಬೆಂಗಳೂರು: ಮಕ್ಕಳ ಕಳ್ಳ ಎಂದು ಭಾವಿಸಿ ಮಧ್ಯಪ್ರದೇಶ ಮೂಲದ ಕೂಲಿ ಕಾರ್ಮಿಕನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೆಣ್ಣೂರಿನ ಸಾರಾಯಿಪಾಳ್ಯದಲ್ಲಿ ನಡೆದಿದೆ. ಘಟನೆಯಲ್ಲಿ 23 ವರ್ಷದ ಕೂಲಿ ಕಾರ್ಮಿಕ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಕಾರ್ಮಿಕ ಹಾಗೂ ಈತನ ಸಹೋದರ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಹೆಣ್ಣೂರಿನ ಸಾರಾಯಿಪಾಳ್ಯದಲ್ಲಿ ವಾಸವಾಗಿದ್ದಾರೆ. ಇಬ್ಬರೂ ಪೇಟಿಂಗ್ ಕೆಲಸ ಮಾಡುತ್ತಾರೆ. ಭಾನುವಾರ ಸಂಜೆ ಕಂಠಪೂರ್ತಿ ಮದ್ಯ ಸೇವಿಸಿದ ಯುವಕ ಸಾರಾಯಿಪಾಳ್ಯದ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.
ಆ ವೇಳೆ ಮೂರು ವರ್ಷದ ಮಗುವೊಂದು ರಸ್ತೆ ಬದಿ ಅಳುತ್ತಾ ಕುಳಿತಿತ್ತು. ಮಗು ಕಂಡ ಯುವಕ, ಸಮಾಧಾನ ಮಾಡಲು ಹೋಗಿದ್ದಾನೆ. ಇದನ್ನು ಗಮನಿಸಿದ ಮಗುವಿನ ಪೋಷಕರು ಅನುಮಾನಗೊಂಡು ಪ್ರಶ್ನಿಸಿದ್ದಲ್ಲದೆ, ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲೇ ಇದ್ದ ಸಾರ್ವಜನಿಕರು ಮಕ್ಕಳ ಕಳ್ಳ ಎಂದು ಭಾವಿಸಿ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಠಾಣೆಗೆ ಕರೆತಂದು ವಿಚಾರಿಸಿದಾಗ, ಮದ್ಯದ ಅಮಲಲ್ಲಿದ್ದ ಯುವಕ, ಮಗುವನ್ನು ಮಾತನಾಡಿಸಲು ಹೋಗಿದ್ದ. ಆತ ಮಕ್ಕಳ ಕಳ್ಳನಲ್ಲ, ಕೂಲಿ ಕಾರ್ಮಿಕ ಎಂದು ಗೊತ್ತಾಗಿದೆ. ಹಲ್ಲೆಗೊಳಗಾದ ಯುವಕನ ಸಹೋದರ ಕೂಡ ಠಾಣೆಗೆ ಬಂದು ಹೇಳಿಕೆ ದಾಖಲಿಸಿದ್ದಾನೆ. ಬಳಿಕ ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಹೆಣ್ಣೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಘಟನೆ: ಮೇ ತಿಂಗಳು ಚಾಮರಾಜಪೇಟೆಯಲ್ಲಿ ರಾಜಸ್ಥಾನ ಮೂಲದ ಕಾಲುರಾಮ್ ಬಚ್ಚನ್‌ರಾಮ್(26) ಎಂಬಾತನ ಮೇಲೆ ಜನರು ಮನಬಂದಂತೆ ಹಲ್ಲೆ ನಡೆಸಿ ಕೊಂದಿದ್ದರು. ಈ ಸಂಬಂಧ ಚಾಮರಾಜಪೇಟೆ ಪೊಲೀಸರು ಸುಮಾರು 15 ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಕಾಲುರಾಮ್ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದು, ಉದ್ದವಾದ ಕೂದಲು ಹಾಗೂ ಗಡ್ಡ ಬಿಟ್ಟಿದ್ದ ಎಂಬ ಕಾರಣಕ್ಕೆ ಮಕ್ಕಳ ಕಳ್ಳ ಎಂದು ಭಾವಿಸಿ ಹಲ್ಲೆ ನಡೆಸಲಾಗಿತ್ತು.
ಪೊಲೀಸರಿಂದ ಅರಿವು: ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿ ವರ್ಧಕ ಹಾಗೂ ಕರಪತ್ರಗಳ ಮೂಲಕ, ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಮಕ್ಕಳ ಕಳ್ಳರು ನಗರಕ್ಕೆ ಬಂದಿಲ್ಲ. ಇದು ವದಂತಿ ಅಷ್ಟೇ.
ಇದಕ್ಕೆ ಕಿವಿಗೊಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಒಂದು ವೇಳೆ ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಕಾನೂನು ಉಲ್ಲಂ ಸಬಾರದು ಎಂದು ಕಠಿಣ ಆದೇಶ ನೀಡಿದ್ದರು. ಆದರೂ ಇಂತಹ ಘಟನೆ ನಡೆದಿರುವುದು ಪೊಲೀಸರಲ್ಲಿ ತಲೆನೋವು ತಂದಿದೆ.