ಬೆಂಗಳೂರು: ಸರ್ಕಾರಿ ದರ ನಿಗದಿಪಡಿಸಬೇಕು, ಕಂಪೆನಿಗಳ ಕಿರುಕುಳದಿಂದ ಮುಕ್ತಿ ಕಲ್ಪಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾನುವಾರ ಓಲಾ-ಉಬರ್ ಚಾಲಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನಸೆಳೆದರು.
ಪ್ರತಿಷ್ಠಿತ ರಸ್ತೆಗಳಾದ ಯುಬಿ ಸಿಟಿ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ಗಳಲ್ಲಿ ಫಲಕಗಳೊಂದಿಗೆ ರಸ್ತೆಗಿಳಿದ ಚಾಲಕರು, ವಾಹನ ಸವಾರರು ಮತ್ತು ಪಾದಚಾರಿಗಳ ಮುಂದೆ ತಮಗಾಗುತ್ತಿರುವ ಅನ್ಯಾಯವನ್ನು ಹೇಳಿಕೊಂಡರು. ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡುತ್ತಿಲ್ಲ; ಇತ್ತ ಕಂಪೆನಿಗಳು ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ದಯವಿಟ್ಟು ನಮ್ಮ ಹೋರಾಟಕ್ಕೆ ದನಿಯಾಗಿ ಎಂದು ಪ್ರತಿಭಟನಾಕಾರರು ಜನರಲ್ಲಿ ಅಲವತ್ತುಕೊಂಡರು.
“ನಾವು ಭಿಕ್ಷುಕರಲ್ಲ; ಓಲಾ-ಉಬರ್ ಚಾಲಕರು’, “ಓಲಾ-ಉಬರ್ ಸಹವಾಸ; ಹೆಂಡತಿ-ಮಕ್ಕಳ ಉಪವಾಸ’, “ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಕಪ್ಪಕಾಣಿಕೆ ನೀಡಬೇಕಿದೆ. ಹಾಗಾಗಿ, 1 ರೂ. ನೆರವು ಕೊಡಿ’ ಎಂಬ ಫಲಕಗಳು ಪ್ರತಿಭಟನೆಯಲ್ಲಿ ಜನರ ಗಮನಸೆಳೆದವು. ಇದಕ್ಕೆ ಪೂರಕವಾಗಿ ಜನ ಕೂಡ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಮನೆಯಲ್ಲಿ ಕುಳಿತು ಶಾಂತಿಯುತವಾಗಿ ಬಂದ್‌ಗೆ ಬೆಂಬಲಿಸುತ್ತಿರುವ ಚಾಲಕರು ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನೆಡೆಸಲು ಅನುಮತಿ ಕೊರುತ್ತಿದ್ದಾರೆ. ಆದರೆ, ಪೋಲೀಸ್ ಇಲಾಖೆ ಅನುಮತಿ ನೀಡುತ್ತಿಲ್ಲ. ಇತ್ತ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ ಚಾಲಕರ ಸಮಸ್ಯೆ ಬಗೆಹರಿಸುತ್ತಿಲ್ಲ.
ಹಾಗಾಗಿ, ಅನಿವಾರ್ಯವಾಗಿ ನಮ್ಮ ಸಮಸ್ಯೆಗಳನ್ನು ರಸ್ತೆ ಬದಿಯಲ್ಲಿ ನಿಂತು ಜನರಿಗೆ ತಲುಪಿಸುತ್ತಿದ್ದೇವೆ’ ಎಂದು ಹೇಳಿದರು. ಯಾರಿಗೂ ತೊಂದರೆ ನೀಡದೆ ಈ ರೀತಿ ಜನರ ಮುಂದೆ ಬಂದಿರುವ ಚಾಲಕರಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು. ಸೋಮವಾರ ಕೂಡ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೆಸರು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ತಿಳಿಸಿದರು.