Advertisement

ಅತೃಪ್ತ ನ್ಯಾಯಮೂರ್ತಿಗಳಿಗೆ ನಿವೃತ್ತ ಜಡ್ಜ್ಗಳಿಂದ ಬೆಂಬಲ

06:00 AM Jan 15, 2018 | Harsha Rao |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗ ಸುದ್ದಿಗೋಷ್ಠಿ ಮತ್ತು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾವಿಸಿರುವ ಅಂಶಗಳಿಗೆ ನಾಲ್ವರು ನಿವೃತ್ತ ನ್ಯಾಯಮೂರ್ತಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಜೆಐ ದೀಪಕ್‌ ಮಿಶ್ರಾಗೆ ಬಹಿರಂಗ ಪತ್ರವನ್ನೂ ಬರೆದಿದ್ದು, ನಾಲ್ವರು ಜಡ್ಜ್ಗಳು ಎತ್ತಿರುವ ವಿಚಾರಗಳನ್ನು ನ್ಯಾಯಾಂಗದ ವ್ಯಾಪ್ತಿಯಲ್ಲಿಯೇ ಪರಿಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

Advertisement

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಪಿ.ಬಿ.ಸಾವಂತ್‌, ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ, ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಸುರೇಶ್‌ ರವಿವಾರ ಸಿಜೆಐ ದೀಪಕ್‌ ಮಿಶ್ರಾಗೆ ಬಹಿರಂಗ ಪತ್ರ ಬರೆದಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

“ಸೂಕ್ಷ್ಮ ಪ್ರಕರಣಗಳನ್ನು ನ್ಯಾಯಮೂರ್ತಿಗಳಿಗೆ ಮತ್ತು ನ್ಯಾಯಪೀಠಕ್ಕೆ ಹಂಚಿಕೆ ಮಾಡುವ ವಿಚಾರದ ಬಗ್ಗೆ ನಾಲ್ವರು ನ್ಯಾಯಮೂರ್ತಿಗಳು ಗಂಭೀರ ವಿಚಾರ ಪ್ರಸ್ತಾವಿಸಿದ್ದಾರೆ. ಅವುಗಳನ್ನು ಏಕಪಕ್ಷೀಯವಾಗಿ ಹಂಚಿಕೆ ನಡೆಸಲಾಗುತ್ತದೆ ಎಂದು ಆರೋಪಿಸಿದ್ದಾರೆ. ಇಂಥ ಕ್ರಮದಿಂದ ನ್ಯಾಯದಾನ ನೀಡುವ ಕ್ರಮ ಮತ್ತು ವ್ಯವಸ್ಥೆಗೆ ಹಾನಿ ಆಗುತ್ತದೆ’ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ ಎಂದಿದ್ದಾರೆ ನ್ಯಾ| ಎ.ಪಿ.ಶಾ. 

ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾವ ಮಾಡಿರುವ ಅಂಶಗಳಿಗೆ ನಮ್ಮದೂ ಸಮ್ಮತಿ ಇದೆ ಎಂದು ಅವರು ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿಗೆ ಕೇಸುಗಳನ್ನು ಹಂಚಿಕೆ ಮಾಡುವ ಅಧಿಕಾರ ಇದೆಯಾದರೂ ಅದು ಏಕಪಕ್ಷೀಯವಾಗಿ ನಡೆಯಬಾರದು. ಈ ವಿಚಾರವನ್ನು ಬಗೆಹರಿಸಿ ಕೇಸುಗಳ ಹಂಚಿಕೆಗೆ ಸೂಕ್ತ ನಿಯಮ ರಚಿಸಿ ಜಾರಿಗೆ ತರಬೇಕಾಗಿದೆ ಎಂದು ಪತ್ರದಲ್ಲಿ ಅಭಿಪ್ರಾಯ ಪಟ್ಟಿರುವುದಾಗಿ ನ್ಯಾ| ಶಾ ಹೇಳಿದ್ದಾರೆ. 

ಅದು ಜಾರಿಯಾಗುವ ವರೆಗೆ ಪ್ರಮುಖ ಪ್ರಕರಣಗಳ ವಿಚಾರಣೆಯನ್ನು ಹಿರಿಯ ನ್ಯಾಯಮೂರ್ತಿಗಳು ಇರುವ ಸಾಂವಿಧಾನಿಕ ಪೀಠವೇ ನಿರ್ವಹಿಸಬೇಕು. ಇಂಥ ಕ್ರಮಗಳೇ ಸುಪ್ರೀಂಕೋರ್ಟ್‌ ಪಾರದರ್ಶಕವಾಗಿದೆ ಎಂದು ತೋರಿಸಲಿವೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.

Advertisement

ಮುಂದೇನು?
1. ಪರಿಹಾರ ಕ್ರಮ ಸೂಚಿಸಿ, ಮುಖ್ಯ ನ್ಯಾಯಮೂರ್ತಿಗಳಿಗೆ ಸಲಹಾ ಪಟ್ಟಿ ಸಲ್ಲಿಸುವುದು

ನಿವೃತ್ತ ನ್ಯಾಯಮೂರ್ತಿ ಜ್ಞಾನ ಸುಧಾ ಮಿಶ್ರಾ ಹೇಳುವ ಪ್ರಕಾರ “ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಸಲಹೆಗಳಿಲ್ಲ. ಹೀಗಾಗಿ ನಾಲ್ವರು ನ್ಯಾಯಮೂರ್ತಿಗಳು ಸಮಸ್ಯೆ ಬಗೆಹರಿಸಲು ಹೊಸತಾಗಿ ಸಲಹೆಗಳನ್ನು ಬರೆದು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಬೇಕು. ನಿಗದಿತ ನ್ಯಾಯಪೀಠ ಅಥವಾ ನ್ಯಾಯಮೂರ್ತಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವುದು ಮುಖ್ಯ ನ್ಯಾಯಮೂರ್ತಿಯ ಪರಮಾಧಿಕಾರ. 

2. ನಾಲ್ವರು ನ್ಯಾಯಮೂರ್ತಿಗಳಿಗೆ  ನ್ಯಾಯಾಂಗ ನಿಂದನೆ ಆದೇಶದ ಬಗ್ಗೆ ನೋಟಿಸ್‌ ಜಾರಿ 
ಮಧ್ಯಪ್ರದೇಶ ಹೈಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿ ಪ್ರಭಾತ್‌ಚಂದ್ರ ಅಗರ್ವಾಲ್‌ ಪ್ರತಿಪಾದಿಸು ವಂತೆ “ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವಂತೆ ಸುದ್ದಿಗೋಷ್ಠಿ ನಡೆಸಿದ ನಾಲ್ವರು ನ್ಯಾಯಮೂರ್ತಿಗಳ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌ ಅನ್ನು ಮುಖ್ಯ ನ್ಯಾಯಮೂರ್ತಿ ಜಾರಿ ಮಾಡಬಹುದು. ಅವರು ಪರಿಸ್ಥಿತಿ ನಿಭಾಯಿಸಿದ ರೀತಿ ಸರಿಯಾಗಿಲ್ಲ. ಪತ್ರಕರ್ತರ ಭೇಟಿಗೆ ಮೊದಲು ಮುಖ್ಯ ನ್ಯಾಯಮೂರ್ತಿಗಳ ಜತೆಗೆ ಮಾತುಕತೆ ನಡೆಸಬೇಕಾಗಿತ್ತು. ನ್ಯಾಯಮೂರ್ತಿ ನಿಗದಿತ ಕೇಸನ್ನು ನನಗೇ ನೀಡಬೇಕು ಎಂದು ಕೇಳುವಂತಿಲ್ಲ’.

3. ಪತ್ರವನ್ನೇ ದೂರನ್ನಾಗಿ ಪರಿಗಣಿಸಿ ಸಿಜೆಐ ತೀರ್ಪು ನೀಡಬಹುದು
ಸಿಜೆ ಐಗೆ ಇರುವ ಹೆಚ್ಚುವರಿ ಆಡಳಿತಾತ್ಮಕ ಅಧಿಕಾರವನ್ನು ರಾಜಕೀಯ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಿಜೆಐ ಇತರ ಹಿರಿಯ ನ್ಯಾಯಮೂರ್ತಿಗಳ ಜತೆ ಮಾತುಕತೆ ನಡೆಸಿ ತಮ್ಮ ಅಧಿಕಾರ ನಿರ್ಣಯಿಸಬೇಕು. ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಪ್ರಕರಣದಲ್ಲಿನ ತೀರ್ಪಿನ ಪ್ರಕಾರ ನ್ಯಾಯಮೂರ್ತಿಗಳ ನೇಮಕ ವ್ಯವಸ್ಥೆಯಲ್ಲಿ ಬದಲಾವಣೆ ಆಗಬಹುದು. ಅದೇ ರೀತಿ ನ್ಯಾಯಮೂರ್ತಿಗಳು ಬರೆದ ಪತ್ರವನ್ನೇ ದೂರನ್ನಾಗಿ ಪರಿಗಣಿಸಿ ತೀರ್ಪು ನೀಡಬಹುದು ಎನ್ನುತ್ತಾರೆ ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾ.ಆರ್‌.ಸಿ.ಛೋಪ್ರಾ.

4. ನಾಲ್ವರು ನ್ಯಾಯಮೂರ್ತಿಗಳು ಒಟ್ಟಾಗಿ ಕುಳಿತು ಚರ್ಚಿಸಿ ಪರಿಹಾರ
ಪತ್ರಕರ್ತರ ಜತೆ ಮಾತನಾಡಿದ್ದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ನ್ಯಾಯಮೂರ್ತಿಗಳಿಗೆ ಮತ್ತು ನ್ಯಾಯಪೀಠಕ್ಕೆ ಕೇಸುಗಳನ್ನು ಹಂಚಿಕೆ ಮಾಡುವುದು ಮುಖ್ಯ ನ್ಯಾಯಮೂರ್ತಿಗಳ ಪರಮಾಧಿಕಾರ. ಸಮಸ್ಯೆ ಇದ್ದಲ್ಲಿ ಕುಳಿತು ಪರಿಹಾರ ಕಂಡುಕೊಳ್ಳಬಹುದು. ಜತೆಗೆ ಸಂಪೂರ್ಣ ಕೋರ್ಟ್‌ ಮೂಲಕವೂ ಪರಿಹಾರ ಕಂಡುಕೊಳ್ಳಬಹುದು. ಸಿಜೆ ಐಗೆ ವಾಗ್ಧಂಡನೆ ನಡೆಸುವ ಬಗ್ಗೆ ಇಲ್ಲಿ ಯಾವುದೇ ವಿಚಾರ ಇಲ್ಲ ಎನ್ನುತ್ತಾರೆ ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ತರುಣ್‌ ಚಟರ್ಜಿ.

5. ಸುಪ್ರೀಂಕೋರ್ಟ್‌ನ ಪೂರ್ಣ ಪೀಠದ ಸಭೆಗೆ ಸಲಹೆ
ಸಮಸ್ಯೆ ಇತ್ಯರ್ಥಗೊಳಿಸಲು ನ್ಯಾಯಮೂರ್ತಿಗಳೇ ಮುಂದಾಗಬೇಕು. ಅದಕ್ಕಾಗಿ ಸುಪ್ರೀಂಕೋರ್ಟ್‌ನ ಸಂಪೂರ್ಣ ಪೀಠ ಸಭೆ ಸೇರಬೇಕು. ಎಲ್ಲ ನ್ಯಾಯಮೂರ್ತಿಗಳು ಚರ್ಚಿಸಿ ಪರಿಹಾರಕ್ಕೆ ಯತ್ನಿಸಬೇಕು. ಪತ್ರಿಕಾಗೋಷ್ಠಿ ನಡೆಸಿದ್ದರಿಂದ ಸುಪ್ರೀಂಕೋರ್ಟ್‌ ಮೇಲೆ ಇರುವ ವಿಶ್ವಾಸ ಕಳೆಗುಂದುವ ಸಾಧ್ಯತೆ ಇದೆ ಎನ್ನುತ್ತಾರೆ ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾ| ಸಮರೇಶ್‌ ಬ್ಯಾನರ್ಜಿ.

ಮಾಹಿತಿ ಕೃಪೆ: ನ್ಯೂಸ್‌18

Advertisement

Udayavani is now on Telegram. Click here to join our channel and stay updated with the latest news.

Next