Advertisement

ಜಿಲ್ಲಾದ್ಯಂತ ಮುಷ್ಕರಕ್ಕೆ  ಬೆಂಬಲ

04:54 PM Mar 29, 2022 | Team Udayavani |

ಬಳ್ಳಾರಿ: ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ, ಕಾರ್ಪೋರೇಟ್‌ ಪರ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬಳ್ಳಾರಿ ಸೇರಿ ಜಿಲ್ಲೆಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲೂ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

Advertisement

ನಗರದ ಹಳೆ ಬಸ್‌ ನಿಲ್ದಾಣ ಬಳಿ ಜಮಾಯಿಸಿದ ಆಶಾ, ಅಂಗನವಾಡಿ, ಬಿಸಿಯೂಟ ನೌಕರರು, ಎಲ್‌ಐಸಿ, ಬ್ಯಾಂಕ್‌, ಕೆಎಸ್‌ಆರ್‌ಟಿಸಿ, ಪೋಸ್ಟಲ್‌, ಬಿಎಸ್‌ಎನ್‌ಎಲ್‌ ಸಂಸ್ಥೆಗಳ ನೌಕರರು, ಸ್ಪಾಂಜ್‌ ಐರನ್‌ ಕಾರ್ಖಾನೆಯ ಹಾಗೂ ಗಣಿಗಾರಿಕೆಯ ನೂರಾರು ಕಾರ್ಮಿಕರು ಪ್ರತಿಭಟನಾ ಸಭೆ ನಡೆಸಿದರು. ಬಳಿಕ ಅಲ್ಲಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಡಗಿ ಚನ್ನಪ್ಪ ವೃತ್ತ, ಮೀನಾಕ್ಷಿ ವೃತ್ತ, ತಹಶೀಲ್ದಾರ್‌ ಕಚೇರಿ ಮೂಲಕ ತೆರಳಿ, ಪುನಃ ವಾಪಸ್‌ ಹಳೆ ಬಸ್‌ ನಿಲ್ದಾಣಕ್ಕೆ ತಲುಪಿತು.

ವ್ಯಾಪಾರ ಸುಗಮಗೊಳಿಸುವ ನೆಪದಲ್ಲಿ 44 ಕಾರ್ಮಿಕ ಪರ ಕಾನೂನುಗಳನ್ನು, 4 ಕೋಡ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ಈ ಮೂಲಕ ಸಂಘಟನೆ ಕಟ್ಟಿಕೊಳ್ಳುವ, ಮುಷ್ಕರ ಹೂಡುವ ಹಾಗೂ ಇನ್ನಿತರೆ ನ್ಯಾಯಸಮ್ಮತ ಹಕ್ಕುಗಳನ್ನು ಕಾರ್ಮಿಕರು ಕಳೆದುಕೊಳ್ಳಲಿದ್ದಾರೆ. ಹೋರಾಟಗಳಿಂದ ಗಳಿಸಿಕೊಂಡ ಕಾರ್ಮಿಕ ಪರ ಕಾನೂನುಗಳನ್ನು ಮಾಲೀಕರ ಹಿತಕ್ಕಾಗಿ ತಿದ್ದುಪಡಿ ಮಾಡಲಾಗುತ್ತಿದೆ. ಇದರ ಪರಿಣಾಮ ಕಾರ್ಮಿಕರ-ನೌಕರರ ಶೋಷಣೆ ಇನ್ನಷ್ಟು ತೀವ್ರವಾಗಲಿದೆ. ಕಾರ್ಪೋರೇಟ್‌ ಮಾಲೀಕರ ಹಿತಕ್ಕಾಗಿ ಕೇಂದ್ರ ಸರ್ಕಾರ ಇಂತಹ ಅನೇಕ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಜನರ ತೆರಿಗೆ ಹಣದಿಂದ ಕಟ್ಟಲಾದ ಸರ್ಕಾರಿ ಸಂಸ್ಥೆ ಹಾಗೂ ಉದ್ಯಮಗಳನ್ನು ಕಾರ್ಪೋರೇಟ್‌ ಮಾಲೀಕರಿಗೆ ಬಿಡಿಗಾಸಿಗೆ ಮಾರಲಾಗುತ್ತಿದೆ.

ಎಲ್‌ಐಸಿ, ಬ್ಯಾಂಕ್‌, ಬಿಎಸ್‌ಎನ್‌ಎಲ್‌, ರೈಲ್ವೆ, ಕಲ್ಲಿದ್ದಲು ಗಣಿ, ವಿದ್ಯುತ್‌, ವಿಮಾನ ನಿಲ್ದಾಣ, ರಸ್ತೆ ಸಾರಿಗೆ ಮುಂತಾದ ಕ್ಷೇತ್ರಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದ್ದು, ಆ ಕ್ಷೇತ್ರಗಳ ನೌಕರರು ನಿರುದ್ಯೋಗ ಸಮಸ್ಯೆ ಎದುರಿಸಲಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವುದರಿಂದ ಖಾಯಂ ಉದ್ಯೋಗಳು ನಾಶವಾಗಿ, ನಿರುದ್ಯೋಗ ಸಮಸ್ಯೆ ಮತ್ತಷ್ಟು ಭೀಕರವಾಗಿ ಕಾಡಲಿದೆ. ಬೆಲೆ ಏರಿಕೆಯಿಂದ ತೆರಿಗೆ ಹೊರೆಯಿಂದ ಈಗಾಗಲೇ ತತ್ತರಿಸಿರುವ ಸಾಮಾನ್ಯ ಜನರಿಗೆ, ಸಣ್ಣ-ಮಧ್ಯಮ ವ್ಯಾಪಾರಸ್ಥರಿಗೆ ಖಾಸಗೀಕರಣ ನೀತಿಗಳು ಗಾಯದ ಮೇಲೆ ಬರೆ ಎಳೆಯಲಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Advertisement

ಪ್ರತಿಭಟನೆಯಲ್ಲಿ ಕೆ.ಸೋಮಶೇಖರ್‌, ಎ.ದೇವದಾಸ್‌, ಜೆ.ಸತ್ಯಬಾಬು, ಡಿ.ವಿ.ಸೂರ್ಯನಾರಾಯಣ, ಟಿ.ಜಿ.ವಿಠಲ್‌, ರೈತ ಸಂಘಟನೆಯ ಮಾಧವರೆಡ್ಡಿ, ಘನಮಲ್ಲಿ, ಕೀರ್ತಿರಾಜ, ಪತ್ತಾರ್‌, ವಿಕ್ರಮ್‌, ಚಂದ್ರಕುಮಾರಿ, ರೇಷ್ಮಾ, ಮಲ್ಲಮ್ಮ, ಜಯರಾಜ್‌, ಪಾಂಡು, ಲಕ್ಷ್ಮೀ, ಓಂಕಾರಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next