ಮುಂಬಯಿ : ಮಹಾರಾಷ್ಟ್ರದಲ್ಲಿನ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರಕ್ಕೆ ಶಿವಸೇನೆ ನೀಡಿರುವ ಬೆಂಬಲ ಕೇವಲ ತಾತ್ಕಾಲಿಕ ಮತ್ತು ಅದರ ಭವಿಷ್ಯವು ಅನಿಶ್ಚಿತವಾಗಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿನ ನಿರ್ಣಾಯಕ ಸ್ಥಳೀಯಾಡಳಿತೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮೇಲೆ ಶಿವಸೇನೆಯು ಈ ಹೊಸ ದಾಳಿಯನ್ನು ಮಾಡಿದೆ. ಚುನಾವಣಾ ಪ್ರಚಾರದಲ್ಲಿ ರಾಜ್ಯದ ಸಮ್ಮಿಶ್ರ ಸರಕಾರದ ಪಾಲುದಾರರು ಪರಸ್ಪರರ ಮೇಲೆ ಕೆಸರೆರೆಚಾಟದಲ್ಲಿ ನಿರತರಾಗಿರುವ ಫಲಶ್ರುತಿ ಇದಾಗಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ನೇರ ಹಾಗೂ ನಿಷ್ಠುರ ನುಡಿಗಳಲ್ಲಿ ಹೀಗೆ ಬರೆದಿದ್ದಾರೆ :
ಮುಖ್ಯಮಂತ್ರಿಗಳು ದಿನನಿತ್ಯ ಎಂಬಂತೆ ಮುಂಬಯಿಯಿಲ್ಲಿ ಹೊಸ ಹೊಸ ಭರವಸೆಗಳನ್ನು ಕೊಡುತ್ತಲೇ ಇದ್ದಾರೆ. ಆದರೆ ಅವರ ಸ್ಥಾನವೇ ಅಭದ್ರವಾಗಿದೆ. ಶಿವಸೇನೆಯ ಬೆಂಬಲದಿಂದ ಅವರು ಕುರ್ಚಿಯ ಮೇಲೆ ಕುಳಿತಿದ್ದಾರೆ. ತಮ್ಮ ಭವಿಷ್ಯವೇ ಅನಿಶ್ಚಿತವಾಗಿರುವಾಗ ಮುಖ್ಯಮಂತ್ರಿಗಳು ಮುಂಬಯಿ ಭವಿಷ್ಯವನ್ನು ಬದಲಾಯಿಸುವ ಮಾತನಾಡುತ್ತಿರುವುದು ವಿಪರ್ಯಾಸಕರ.
ಮಹಾರಾಷ್ಟ್ರ ಸ್ಥಿರವಾಗಿ ಉಳಿಯುವ ಏಕೈಕ ಉದ್ದೇಶದಿಂದ ಶಿವಸೇನೆಯು ರಾಜ್ಯದಲ್ಲಿನ ಬಿಜೆಪಿ ಸರಕಾರಕ್ಕೆ ತಾತ್ಕಾಲಿಕ ಬೆಂಬಲ ನೀಡಿದೆ ಎನ್ನುವುದನ್ನು ಅವರು ಮರೆಯಕೂಡದು. ಮುಖ್ಯಮಂತ್ರಿಗಳು ನಗರದ ಗಲ್ಲಿ ಗಲ್ಲಿಯಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ; ಇದನ್ನು ಕಂಡರೆ ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ ಎನ್ನಬೇಕಾಗುತ್ತದೆ’.