Advertisement

ಕನಸಿಗೆ ರೆಕ್ಕೆಯಾಗಿ, ಪಂಜರವಾಗಬೇಡಿ

04:37 PM Jun 22, 2021 | Team Udayavani |

ಅನಾದಿಕಾಲದಿಂದಲು ಹೆಣ್ಣಿನ ಸ್ವಾತಂತ್ರ್ಯಕ್ಕೆ ಅಷ್ಟಾಗಿ ಯಾರು ಪ್ರಾಶಸ್ತ್ಯ ನೀಡಿಲ್ಲ. ಅವಳು ಹುಟ್ಟಿನಿಂದ ಸಾಯುವವರೆಗು ಒಂದಲ್ಲ ಒಂದು ರೀತಿ ಯಾವುದೋ ಸಂಬಂಧದಲ್ಲಿ ಅಥವಾ ಯಾರದೋ ಕಾಳಜಿಯಲ್ಲೇ ಇರುತ್ತಾಳೆ. ಅವಳ ಬೆಳವಣಿಗೆಯ ಪ್ರತಿಹಂತದಲ್ಲೂ ರಕ್ಷಣೆಯಾಗಿ ಯಾರಾದರೂ ನಿಂತಿರುತ್ತಾರೆ. ಎಲ್ಲ ನಿರ್ಧಾರಗಳನ್ನು ತಾವೇ ತೆಗೆದುಕೊಂಡು, ಯಾವುದೇ ಕೆಲಸಮಾಡಲು ಬೇರೊಬ್ಬರ ಮೇಲೆ ಅವಲಂಬಿತರಾಗುವಂತೆ ಮಾಡಿ ಕೊನೆಗೆ ಹೆಣ್ಣು ಬಲಹೀನಳು ಎಂಬ ಪಟ್ಟವನ್ನು ಕಟ್ಟುತ್ತಾರೆ. ಎಷ್ಟೋ ಜನರು ಹೆಣ್ಣು ಎಂಬ ಪದದ ಸಮಾನಾರ್ಥ ಜವಾಬ್ದಾರಿ ಎಂದುಕೊಂಡಿದ್ದಾರೆ. ಆ ಹೆಣ್ಣಿನ ಆಸೆ, ಕನಸುಗಳ ಬಗ್ಗೆ ಕೇಳದೇ ಅವುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಸಹ ಮಾಡದೇ ಎಷ್ಟು ಬೇಗ ತಮ್ಮ ಜವಾಬ್ದಾರಿಯಿಂದ ಮುಕ್ತವಾಗುತ್ತೇವೋ ಎಂದು ಕಾಯುತ್ತಿರುತ್ತಾರೆ.

Advertisement

ದೇಶದಲ್ಲಿನ ಹೆಣ್ಣು ಮಕ್ಕಳು ತಮ್ಮ ಸ್ವಾತಂತ್ರ್ಯಕ್ಕಾಗಿ ಪ್ರತಿನಿತ್ಯ ಹೋರಾಟ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಸ್ವತ್ಛಂದವಾಗಿ ಜೀವಿಸುವ ಸ್ವಾತಂತ್ರ್ಯವಿದೆ.  ಹಾಗೆಯೇ ಪ್ರತಿಯೊಬ್ಬರು ತಮ್ಮ ಅಭಿಪ್ರಾಯಗಳನ್ನು, ಆಸೆ ಆಕಾಂಕ್ಷೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮತ್ತು ಅವುಗಳನ್ನೆಲ್ಲ ಕಾರ್ಯರೂಪಕ್ಕೆ ತರುವ ಅವಕಾಶವಿದೆ ಇದು ನಮ್ಮ ಹಕ್ಕು ಕೂಡ. ಈ ಹಕ್ಕನ್ನು ನಮ್ಮ ದೇಶದ ಸಂವಿಧಾನವೇ ಎಲ್ಲರಿಗೂ ಸಮಾನವಾಗಿ ನೀಡಿದೆ. ಆದರೂ ಸಹ ಇಂದಿಗೂ ಹೆಣ್ಣಿಗೆ, ಗಂಡಿನ ಸರಿಸಮಾನವಾದ ಹಕ್ಕನ್ನು ನೀಡಲು ಯಾರು ಸಿದ್ಧರಿಲ್ಲ.  ಏಕೆಂದರೆ ಹೆಣ್ಣನ್ನು ರಕ್ಷಣೆಯೆಂಬ ಪಂಜರದಲ್ಲಿ ಬಂಧಿಮಾಡಿದ್ದಾರೆ.  ಹೆಣ್ಣುಮಕ್ಕಳ ಮೇಲೆ ಕಾಳಜಿ ತೋರುವುದು ತಪ್ಪಲ್ಲ, ಆದರೆ ಅವರನ್ನು ಪಂಜರದಂತೆ ಮಾಡಿ ಅದರಲ್ಲಿ ಅವರ ಅಸಂಖ್ಯಾತ ಕನಸುಗಳನ್ನು ಬಂಧಿಸಿಡುವುದು ತಪ್ಪು. ಹೆಣ್ಣುಮಕ್ಕಳ ಮೇಲೆ ತಮ್ಮ ಅಭಿಪ್ರಾಯವೇರಿ ಅವರನ್ನು ಹತೋಟಿಗೆ ತೆಗೆದುಕೊಳ್ಳುವ ವಿಕೃತ ಮನಃಸ್ಥಿತಿಗಳು ಇನ್ನಾದರೂ ಬದಲಾಗಬೇಕು. ಸಂಬಂಧಗಳೆಂಬ ಸಂಕೋಲೆಗಳು ಪಂಜರವಾದರೆ ಸ್ವಾತಂತ್ರ್ಯ ಮರೀಚಿಕೆಯಾಗುತ್ತದೆ. ಅವಳ ಸ್ವಾತಂತ್ರ್ಯಕ್ಕೂ ಅವಕಾಶ ನೀಡಿ. ಅವಳ ಕನಸುಗಳಿಗೆ ರೆಕ್ಕೆಯಾಗಿ, ಅವಳನ್ನು ಮುಕ್ತವಾಗಿ ಹಾರಾಡಲು ಬಿಡಿ.

 

ಹರ್ಷಿತಾ ಎಂ.

ಮಾನಸಗಂಗೋತ್ರಿ, ಮೈಸೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next