ಕುಷ್ಟಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಸ್ವಯಂ ಘೋಷಣೆಯನ್ನು ಎಫ್‌ಆರ್‌ಯುಐಟಿಎಸ್ (ಪ್ರೂಟ್ಸ್) ದತ್ತಾಂಶದಲ್ಲಿ ನಮೂದಿಗಾಗಿ ಪಹಣಿ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಝರಾಕ್ಸ ದಾಖಲಾತಿಗಳೊಂದಿಗೆ ಗ್ರಾಪಂ, ರೈತ ಸಂಪರ್ಕ ಕೇಂದ್ರ ಹಾಗೂ ನಾಡ ಕಚೇರಿಯಲ್ಲಿ ಜೂ. 26ರೊಳಗೆ ಸಲ್ಲಿಸುವಂತೆ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಕೋರಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಈಗಾಗಲೇ 14,387 ರೈತರ ನೋಂದಣಿಯಾಗಿದೆ, ಬಾಕಿ ಉಳಿದ ರೈತರ ಸ್ವಯಂ ಘೋಷಣೆಯನ್ನು ದತ್ತಾಂಶದಲ್ಲಿ ನಮೂದು ಮಾಡುವುದು ಸರಳೀಕರಣಗೊಳಿಸಿದೆ. ಅರ್ಜಿ ನಮೂನೆಗಳನ್ನು ತಾಲೂಕಿನ ಗ್ರಾಪಂ, ರೈತ ಸಂಪರ್ಕ ಕೇಂದ್ರ ಹಾಗೂ ನಾಡ ಕಚೇರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಆಯಾ ಪಂಚಾಯತಿಯವರು ಆಯಾ ಹೋಬಳಿ, ರೈತ ಸಂಪರ್ಕ ಕೇಂದ್ರಗಳಲ್ಲಿ ನಮೂನೆಗಳು ಲಭ್ಯವಿದ್ದು, ಭರ್ತಿ ಮಾಡಿದ ನಮೂನೆಯೊಂದಿಗೆ ಸಲ್ಲಿಸಬೇಕು. ಬದಲಿಗೆ ತಾಲೂಕು ಕೇಂದ್ರಕ್ಕೆ ಬಂದು ಸರದಿಯಲ್ಲಿ ನಿಲ್ಲಬಾರದು ಎಂದರು. ಪಹಣಿ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಆ ಪ್ರತಿ ಇದ್ದರೆ ಸಾಕು. ಪಹಣಿಯಲ್ಲಿ ರೈತರ ಹೆಸರು, ಸರ್ವೇ ನಂಬರ್, ಹಿಸ್ಸಾ ಸಂಖ್ಯೆಯ ಬ್ಯಾಂಕ್ ಖಾತೆಯ ಬ್ಯಾಂಕಿನ ಐಎಸ್‌ಎಸ್‌ಸಿ ಸಂಖ್ಯೆ, ಬ್ಯಾಂಕ್ ಶಾಖೆ, ನಿಖರ ಮಾಹಿತಿಗೆ ಸಿಗುವ ಉದ್ದೇಶದಿಂದ ದಾಖಲಾತಿಗಳನ್ನು ಕೇಳಲಾಗಿದೆ ಎಂದರು.
ಎಫ್‌ಆರ್‌ಯುಐ ಟಿಎಸ್ (ಪ್ರೂಟ್ಸ್) ದತ್ತಾಂಶದಲ್ಲಿ ನಮೂದು ವೇಳೆಯಲ್ಲಿ ಗ್ರಾಪಂನಲ್ಲಿ ಸಿಬ್ಬಂದಿಗಳ ಅಸಹಕಾರ, ಏನಾದ್ರೂ ತೊಂದರೆ ಕಂಡು ಬಂದಲ್ಲಿ ತಮ್ಮನ್ನು ಸಂಪರ್ಕಿಸಲು ತಾಪಂ ಇಒ ತಿಮ್ಮಪ್ಪ ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಸುರೇಶ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ರಮೇಶ, ಹನುಮಸಾಗರ ಕಂದಾಯ ನಿರೀಕ್ಷಕರಾದ ಉಮೇಶ ಗೌಡ್ರು, ನಾಡ ತಹಶೀಲ್ದಾರ್ ರೇಣುಕಾ, ಹನುಮನಾಳ ಕಂದಾಯ ನಿರೀಕ್ಷಕ ಆಂಜನೇಯ, ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್ ಮೂಲಿಮನಿ, ಮಹಿಳಾ ಅಧ್ಯಕ್ಷೆ ಮಹಾಂತಮ್ಮ ಪಾಟೀಲ, ವೀರಪ್ಪ ಜೀಗೇರಿ, ಶರಣಪ್ಪ ಕಮತರ, ಶರಣಪ್ಪ ಬಾಚಲಾಪೂರ, ಮಲ್ಲಪ್ಪ ಚಿಂಚಲಿ, ದೊಡ್ಡಬಸವ, ಮಹಾತೇಶ ಬಳಿಗಾರ ಇದ್ದರು.