ಅರಸೀಕೆರೆ: ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಎಲ್ಲಾ ಪಕ್ಷಗಳ ನಾಯಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ನಗರದ ರೈಲ್ವೆ ನಿಲ್ದಾಣ ರಸ್ತೆ ಹಾಗೂ ಗೂಡ್ಸ್‌ಶೆಡ್ ರಸ್ತೆಗಳ ಅಭಿವೃದ್ಧಿಗಾಗಿ ಶಾಸಕರ ವಿಶೇಷ ಅನುದಾನದಡಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿಗೆ ಚಾಲನೆ ನೀಡಲು ನಗರಸಭೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಶಾಸಕರು ಮಾತನಾಡಿದರು.
ನಗರಸಭೆ ಸದಸ್ಯ ಎಂ.ಸಮೀವುಲ್ಲಾ ಮಾತನಾಡಿ, ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲದಿದ್ದರೂ ಪಕ್ಷಾತೀತವಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಶಾಸಕರು ತೆಗೆದುಕೊಂಡು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದ್ದರಿಂದ ನಾವುಗಳ ಅವರು ಕಾರ್ಯಕ್ಕೆ ಕೈ ಜೋಡಿಸಿದರೇ ಮಾತ್ರ ನಾವು ಪ್ರತಿನಿಧಿಸುವ ವಾರ್ಡ್‌ಗಳ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಜೊತೆಗೆ ನಾವುಗಳು ಜನರ ಪ್ರೀತಿ ವಿಶ್ವಾಸವನ್ನು ಗಳಿಸುವ ಮೂಲಕ ಉತ್ತಮ ಹೆಸರನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಕಾಂತರಾಜ್, ನಗರಸಭೆ ಸದಸ್ಯರಾದ ಶ್ವೇತಾ, ಗಿರೀಶ್, ಪುಟ್ಟರಾಜು, ಜೆಡಿಎಸ್ ಮುಖಂಡರಾದ ಧರ್ಮಶೇಖರ್, ಧರ್ಮೇಶ್, ಸಿಖಂದರ್, ಬಿಜೆಪಿ ಮುಖಂಡರಾದ ರಮೇಶ್ ನಾಯ್ಡು, ಶಿವನ್‌ರಾಜ್, ಶೇಖರ್, ವಿಶ್ವನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಹವಾಲು ಸಲ್ಲಿಸಿದ ಸಾರ್ವಜನಿಕರು: ನಗರದ ಪ್ರಮುಖ ರಸ್ತೆಯಾದ ರೈಲ್ವೆ ನಿಲ್ದಾಣ ರಸ್ತೆ ಹಾಗೂ ಗೂಡ್ಸ್‌ಶೆಡ್ ಹಾಗೂ ಪ್ರತಿನಿತ್ಯ ರೈಲು ನಿಲ್ದಾಣಕ್ಕೆ ಸಹಸ್ರಾರು ಜನರು ಬಂದು ಹೋಗುತ್ತಾರೆ. ಆದ್ದರಿಂದ ಈ ರಸ್ತೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬೇಕಾಗಿದೆ. ಅಲ್ಲದೆ ರಸ್ತೆ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಯಾರೂ ವ್ಯಾಪಾರ ಮಾಡದಂತೆ ನೋಡಿಕೊಂಡು ವಾಹನಗಳ ಸಂಚಾರಕ್ಕೆ ಹಾಗೂ ಪಾದಚಾರಿಗಳು ಮುಕ್ತವಾಗಿ ತಿರುಗಾಡಲು ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರಲ್ಲಿ ಸಾರ್ವಜನಿಕರು ಮನವಿ ಮಾಡಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಿಲ್ಲ. ನಗರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹೋರಾಟವನ್ನು ಮಾಡಿದ್ದೇನೆ. ಚುನಾವಣೆಯ ನಂತರ ನಗರಸಭೆ ಹಾಗೂ ವಿಧಾನ ಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ
-ಕೆ.ಎಂ.ಶಿವಲಿಂಗೇಗೌಡ, ಶಾಸಕ