ಕಮಲಾಪುರ: ಇಲ್ಲಿನ ಹೈನುಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಹೋರಾಟವನ್ನು ಕರ್ನಾಟಕ ಪ್ರಾಂತ ಸಂಘ ಮತ್ತು ವಿವಿಧ ಸಂಘಟನೆಗಳ ಮುಖಂಡರು ಬೆಂಬಲಿಸಿದ್ದು, ಸರ್ಕಾರದ ನಿರ್ಲಕ್ಷ್ಯದ ಧೋರಣೆ ಖಂಡಿಸಿ ಬುಧವಾರ ಮಹಾಗಾಂವ ಕ್ರಾಸ್‌ನಲ್ಲಿ ರಸ್ತೆ ಪಡೆದು ಪ್ರತಿಭಟನೆ ನಡೆಸಿದರು.
ಮಹಾವಿದ್ಯಾಲಯದಲ್ಲಿ ಬೋಧಕ- ಬೋಧಕೇತರ ಸೇರಿದಂತೆ ಯಾವುದೇ ಹುದ್ದೆಗಳಿಗೆ ಕಾಯಂ ಭರ್ತಿ ಮಾಡಿಕೊಂಡಿಲ್ಲ. ಇದೇ ಕಾರಣಕ್ಕೆ ಐಸಿಎಆರ್ ಮಾನ್ಯತೆಯಿಂದ ಹೊರಗುಳಿಯಲು ಪ್ರಮುಖವಾದ ಕಾರಣವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ಗಳು ಗಳಿಸಿದರೂ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಅನ್ಯಾಯಕ್ಕೆ ಒಳಗಾಗುವಂತೆ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ತಕ್ಷಣವೇ ವಿದ್ಯಾರ್ಥಿಗಳ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.
ಕೂಡಲೇ ಈ ಮಹಾವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಒದಗಿಸಿ, ಕಾಯಂ ಹುದ್ದೆಗಳನ್ನು ಭರ್ತಿ ಮಾಡಬೇಕು. ಐಸಿಎಆರ್ ಮಾನ್ಯತೆ ನೀಡಬೇಕು. ಇಲ್ಲಿ ರ್‍ಯಾಂಕ್ ಗಳಿಸಿದಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸೇರ್ಪಡೆ ಮಾಡಲು ಕ್ರಮ ವಹಿಸಬೇಕು. ಜತೆಗೆ ಮಹಾವಿದ್ಯಾಲಯದ ಮೂಲಕ ರೈತರಿಗೂ ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕೆಂದು ದೆಹಲಿಯ ಕೃಷಿ ಭವನದ ಕಾರ್ಯದರ್ಶಿ ಡಾ| ತ್ರಿಲೋಚನ್ ಮೊಹಾಪಾತ್ರ ಅವರಿಗೆ ತಹಶೀಲ್ದಾರ್ ನಿಸರ್ ಅಹಮ್ಮದ್ ಮತ್ತು ಹೈನುಗಾರಿಕೆ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ದೇವರಾಜ್ ಆರ್. ಮೂಲಕ ಮುಖಂಡರು ಮನವಿ ಪತ್ರದ ಸಲ್ಲಿಸುವ ಮೂಲಕ ಆಗ್ರಹಿಸಿದರು.
ಅಲ್ಲದೇ, ಈ ಸಂದರ್ಭದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷéದಿಂದಲೇ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಸ್ಥಳೀಯರಾದ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ “ದಿವ್ಯ ಕಾಶಿ, ಭವ್ಯ ಕಾಶಿ’ ಎಂದು ಹೇಳಿಕೆ ನೀಡುತ್ತಾರೆ. ಮೊದಲು ಮಹಾಗಾಂವ್ ಗ್ರಾಮದಲ್ಲಿ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಕೆಲಸ ಮಾಡಿ ಎಂದು ಕುಟುಕಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಗೌರಮ್ಮ ಪಾಟೀಲ, ರೇವಣಸಿದ್ದಪ್ಪ ಕಲಬುರಗಿ, ಮಹೇಂದ್ರ ಸಿಂಗೆ ಮತ್ತಿತರರು ಪಾಲ್ಗೊಂಡಿದ್ದರು.