Advertisement

ಈರುಳ್ಳಿಗೆ 2500 ರೂ. ಬೆಂಬಲ ಬೆಲೆ ಘೋಷಿಸಿ

03:25 PM Apr 12, 2022 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ ಈರುಳ್ಳಿಗೆ 2500 ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್‌.ಎಂ. ಸಿದ್ದೇಶ್‌ ಒತ್ತಾಯಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷದಿಂದ ಈರುಳ್ಳಿಗೆ ಉತ್ತಮ ಧಾರಣೆ ದೊರೆಯದೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಪ್ರತಿ ಕ್ವಿಂಟಲ್‌ಗೆ 2,500 ರೂಪಾಯಿ ಬೆಂಬಲ ಬೆಲೆ ಘೋಷಿಸುವ ಮೂಲಕ ಬೆಳೆಗಾರರ ಸಂರಕ್ಷಣೆ ಮಾಡಬೇಕು ಎಂದರು.

ರಾಜ್ಯಾದ್ಯಂತ ಸತತ ಮೂರು ವರ್ಷಗಳಿಂದ ಈರುಳ್ಳಿಗೆ ಕೊಳೆ ರೋಗ ಒಂದು ರೀತಿಯಲ್ಲಿ ಕೊರೊನಾ ವೈರಸ್‌ನಂತೆ ಬಾಧಿ ಸುತ್ತಿದೆ. ಕೊಳೆರೋಗದ ಬಗ್ಗೆ ವಿಜ್ಞಾನಿಗಳು ಸಹ ಪರಿಶೀಲನೆ ನಡೆಸಿ ಸಲಹೆ ನೀಡಿದ್ದಾರೆ. ಆದರೆ ಯಾವುದೂ ಉಪಯೋಗಕ್ಕೆ ಬಾರದಂತಾಗಿದೆ. ಹಾಗಾಗಿ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಕನಿಷ್ಠ ಒಂದು ಲಕ್ಷ ರೂ. ಖರ್ಚಾಗುತ್ತದೆ. ಅಷ್ಟೊಂದು ಖರ್ಚು ಮಾಡಿದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ದಲ್ಲಾಲರಿಗೆ ಲಾಭ ಆಗುತ್ತಿದೆಯೇ ಹೊರತು ಕಷ್ಟಪಟ್ಟು ಬೆಳೆದಂತಹ ರೈತರಿಗೆ ಯಾವುದೇ ಲಾಭ ದೊರೆಯುತ್ತಿಲ್ಲ. ಕಾರಣ ಸರ್ಕಾರ ಪ್ರತಿ ಕ್ವಿಂಟಲ್‌ ಗೆ 2500 ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದರು.

ಈಗ ಮುಕ್ತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ ಈರುಳ್ಳಿಗೆ 1500 ರೂ. ದರ ಇದೆ. ಇದರಿಂದಾಗಿ ರೈತರಿಗೆ ಪ್ರತಿ ಕ್ವಿಂಟಲ್‌ಗೆ 500 ರೂಪಾಯಿಗಿಂತಲೂ ಹೆಚ್ಚು ನಷ್ಟ ಆಗುತ್ತದೆ. ಬಿತ್ತನೆ, ಕಳೆ, ಕಟಾವು ಸೇರಿದಂತೆ ರೈತರಿಗೆ ಪ್ರತಿ ಕ್ವಿಂಟಲ್‌ಗೆ 2 ಸಾವಿರ ರೂಪಾಯಿ ವೆಚ್ಚ ಆಗಲಿದೆ. ನಷ್ಟ ಸರಿದೂಗಿಸಲು ಸರ್ಕಾರ ಕೂಡಲೇ 2500 ರೂ. ಬೆಂಬಲ ಬೆಲೆ ಘೋಷಿಸುವ ಮೂಲಕ ಈರುಳ್ಳಿ ಬೆಳೆಗಾರರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

Advertisement

ಈರುಳ್ಳಿ ಬೆಳೆಗಾರರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಬಿ.ಎಂ. ವೇದಮೂರ್ತಿ, ಗೌರವಾಧ್ಯಕ್ಷರಾಗಿ ಮಲ್ಲಿಕಾರ್ಜುನ ಅಣಬೂರು ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದ ಪದಾಧಿಕಾರಿಗಳು, ತಾಲೂಕು ಸಂಘಗಳನ್ನು ನೂತನ ಅಧ್ಯಕ್ಷರು, ಗೌರವಾಧ್ಯಕ್ಷರು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು. ಸಂಘದ ಶರಣಪ್ಪ, ಪ್ರಭಾಕರ್‌, ಎಚ್‌. ಉಮೇಶ್‌, ಶಿವನಗೌಡ, ಸಂತೋಷ್‌ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಸರ್ಕಾರಕ್ಕಿಲ್ಲ ರೈತ ಪರ ಕಾಳಜಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತವೆ. ಆದರೆ ರೈತರ ಬೆನ್ನೆಲುಬು ಬಾಗಿದಾಗ ಯಾರೂ ಸಹಾಯ ಮಾಡುವುದಿಲ್ಲ. ಸರ್ಕಾರ ರೈತರ ಬಗ್ಗೆ ಕಿಂಚಿತ್‌ ಕಾಳಜಿಯೇ ಇಲ್ಲದಂತೆ ವರ್ತನೆ ಮಾಡುತ್ತಿದೆ. ಸಚಿವರು, ಶಾಸಕರು ಕೂಡ ಯಾವುದೇ ಹೇಳಿಕೆ ನೀಡುತ್ತಿಲ್ಲ. ನಷ್ಟ ಹೊಂದಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಂತಹ ರೈತ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಿದ್ದೇಶ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next