Advertisement

ಪ್ರಜ್ವಲ್‌ ಹೇಳಿಕೆಗೆ ಜೆಡಿಎಸ್‌ ಭಿನ್ನರ ಬೆಂಬಲ

04:00 AM Jul 08, 2017 | |

ಬೆಂಗಳೂರು: ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡು ವವರಿಗೆ ಹಿಂದಿನ ಸೀಟು, ಸೂಟ್‌ ಕೇಸ್‌ ತಂದವರಿಗೆ ಮುಂದಿನ ಸೀಟು ಎಂಬ ಜೆಡಿಎಸ್‌ ಯುವ ಮುಖಂಡ ಪ್ರಜ್ವಲ್‌ ರೇವಣ್ಣ ಹೇಳಿಕೆಗೆ ಧ್ವನಿಗೂಡಿಸಿರುವ ಜೆಡಿಎಸ್‌ ಭಿನ್ನ ಮತೀಯ ಶಾಸಕರಾದ ಜಮೀರ್‌ ಅಹ ಮದ್‌ ಮತ್ತು ಬಾಲಕೃಷ್ಣ, ಪ್ರಜ್ವಲ್‌ ಮಾತು ಸತ್ಯ. ಎಚ್‌.ಡಿ. ಕುಮಾರಸ್ವಾಮಿ ಸೂಟ್‌ಕೇಸ್‌ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement

ಬೆಂಗಳೂರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್‌ ಭಿನ್ನಮತೀಯ ಶಾಸಕ ಜಮೀರ್‌ ಅಹಮದ್‌, ಕುಮಾರಸ್ವಾಮಿ ಬೇರೆಯವರ ಏಳಿಗೆ ಸಹಿಸೋದಿಲ್ಲ. ಅಣ್ಣನ ಮಗ ಪ್ರಜ್ವಲ್‌ ಏಳಿಗೆಯನ್ನೇ ಸಹಿಸದ ಅವರು ನಮ್ಮಂಥವರ ಏಳಿಗೆ ಸಹಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಅವರಿಗೆ ನನ್ನ ಬೆಂಬಲ ಇದೆ. ದೇವೇಗೌಡರು ಸೂಟ್‌ಕೇಸ್‌ ರಾಜಕೀಯ ಮಾಡುವುದಿಲ್ಲ ಆದರೆ, ಕುಮಾರಸ್ವಾಮಿ ಸೂಟ್‌ಕೇಸ್‌ ರಾಜಕೀಯ ಮಾಡುವುದರಲ್ಲಿ ಎತ್ತಿದ ಕೈ . ಟಿಕೆಟ್‌ ಹಂಚಿಕೆಯಲ್ಲಿ ದೇವೇಗೌಡ-ಕುಮಾರಸ್ವಾಮಿ ಪೈಪೋಟಿ ನಡೆಸಿದ್ದಾರೆ. ದೇವೇಗೌಡರು ಒಂದು ರೀತಿ ಮಾತನಾಡಿದರೆ ಕುಮಾರಸ್ವಾಮಿ ಮತ್ತೂಂದು ರೀತಿ ಮಾತನಾಡುತ್ತಾರೆ. ಇದೇ ಪಕ್ಷದಲ್ಲಿ ಗೊಂದಲಕ್ಕೆ ಕಾರಣ ಎಂದು ಹೇಳಿದರು.

ಕುಮಾರಸ್ವಾಮಿ ವರ್ತನೆಯೇ ನಾವೆಲ್ಲಾ ಪಕ್ಷ ಬಿಡಲು ಕಾರಣ. ದೇವೇಗೌಡರು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿದರೆ ಕುಮಾರಸ್ವಾಮಿ ಸೂಟ್‌ಕೇಸ್‌ ಕೊಟ್ಟವರಿಗೆ ಮಣೆ ಹಾಕುತ್ತಾರೆ ಎಂದು ದೂರಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ನಾವು ಏಳೂ ಶಾಸಕರು ಸ್ಪರ್ಧೆ ಮಾಡುವುದು ಖಚಿತ. ಸದ್ಯಕ್ಕೆ ಕಾಂಗ್ರೆಸ್‌ ಸೇರ್ಪಡೆಗೆ ಕಾನೂನು ತೊಡಗಿದೆ. ಹೀಗಾಗಿ, ಸುಮ್ಮನಿದದೇವೆ. ಆದರೆ, ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳಿದರು.

Advertisement

ಮತ್ತೂಬ್ಬ ಶಾಸಕ ಮಾಗಡಿ ಬಾಲಕೃಷ್ಣ ಮಾತನಾಡಿ, ಪ್ರಜ್ವಲ್‌ ರೇವಣ್ಣ ಅವರ ಮಾತು ಸತ್ಯ. ಅವರ ಹೇಳಿಕೆ ತಿರುಚಲಾಗಿದೆ ಎಂಬುದರಲ್ಲಿ ಹುರುಳಿಲ್ಲ. ತಾತ ಹಾಗೂ ಚಿಕ್ಕಪ್ಪನ ಒತ್ತಡದಿಂದ ಆ ರೀತಿ ಹೇಳುತ್ತಿರಬಹುದು. ಆದರೆ, ಜೆಡಿಎಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಪ್ರಜ್ವಲ್‌ ಹೇಳಿಕೆ ಸಾಕ್ಷಿ ಎಂದು ತಿಳಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದನ್ನು ಅವರ ಮನೆಯವರೇ ತಪ್ಪಿಸುತ್ತಾರೆ. ದೇವೇಗೌಡರು ಕಾಂಗ್ರೆಸ್‌ ಜತೆ ಸೇರಿ ಸರ್ಕಾರ ರಚನೆ ಮಾಡುವ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಖಚಿತ. ಮಾಗಡಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಆ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್‌ನಲ್ಲಿ ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ಜೆಡಿಎಸ್‌ ಪಕ್ಷದೊಳಗಿನ ವಿಚಾರಕ್ಕೆ
ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ನೀಡಿರುವ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಜೆಡಿಎಸ್‌ನಲ್ಲಿ ಎಚ್‌.ಡಿ.ದೇವೇಗೌಡರ ಮಾತೇ ಅಂತಿಮ. ಅವರ ಮಾತನ್ನು ಯಾರೂ ಮೀರುವುದಿಲ್ಲ. ವಿಶ್ವನಾಥ್‌ ಅವರು ಜೆಡಿಎಸ್‌ಗೆ ಬಂದಿರುವುದರಿಂದ ಪಕ್ಷದೊಳಗೆ ಯಾವುದೇ ರೀತಿಯ ಗೊಂದಲ ಉಂಟಾಗಿಲ್ಲ. ಅವರ ಸೇರ್ಪಡೆಯಿಂದ ಜೆಡಿಎಸ್‌ಗೆ ಮತ್ತಷ್ಟು ಬಲ ಬಂದಿದೆ.

– ಎಚ್‌.ಡಿ.ರೇವಣ್ಣ, ಮಾಜಿ ಸಚಿವ, ಪ್ರಜ್ವಲ್‌ ತಂದೆ.

ನನ್ನ ಸೇರ್ಪಡೆಯಿಂದ ಜೆಡಿಎಸ್‌ನಲ್ಲಿ ಗೊಂದಲ ಉಂಟಾಗಿದೆ ಎಂಬುದು ಕಥೆ. ಜೆಡಿಎಸ್‌ನ ಹಿಂದಿನ ಘಟನೆಗಳು, ಗುರುವಾರ ಹುಣಸೂರಿನಲ್ಲಿ ನಡೆದ ಘಟನೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವುಗಳ ಬಗ್ಗೆ ಪಕ್ಷದಲ್ಲಿನ ದೊಡ್ಡವರು ಮಾತನಾಡುತ್ತಾರೆ. ನಾನು ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ.
– ಎಚ್‌.ವಿಶ್ವನಾಥ್‌,
ಜೆಡಿಎಸ್‌ ಮುಖಂಡ.

ಜೆಡಿಎಸ್‌ನಲ್ಲಿ ಸೂಟ್‌ ಕೇಸ್‌ ಸಂಸ್ಕೃತಿ ಇಲ್ಲ. ಪ್ರಜ್ವಲ್‌ ರೇವಣ್ಣ ಆವೇಶದಲ್ಲಿ ಹೇಳಿಕೆ ನೀಡಿದ್ದಾರೆ. ಮೂರು
ವರ್ಷಗಳಿಂದ ಹುಣಸೂರಿನಲ್ಲಿ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಟಿಕೆಟ್‌ ಆಕಾಂಕ್ಷಿ ಆಗಿದ್ದಾರೆ. ಆದರೆ, ಟಿಕೆಟ್‌ ನೀಡುವುದು ಪಕ್ಷದ ನಾಯಕರ ನಿರ್ಧಾರಕ್ಕೆ ಬಿಟ್ಟದ್ದು.

– ಮಧು ಬಂಗಾರಪ್ಪ,
ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next