ಚಿಕ್ಕಮಗಳೂರು : ‘ನನ್ನ ಅಜ್ಜಿ, ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿಯವರಿಗೆ ಅವರ ಕಷ್ಟದ ದಿನಗಳಲ್ಲಿ ನೀವು ಆಕೆಗೆ ಬೆಂಬಲ ಕೊಟ್ಟು ಆಶೀರ್ವದಿಸಿದ್ದೀರಿ. ಅದೇ ರೀತಿಯ ಬೆಂಬಲವನ್ನು ಈಗ ನನಗೂ ಕೊಡಿರೆಂದು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ರಾಜಕೀಯ ಪುನರಾಗಮನವನ್ನು ಚಿಕ್ಕಮಗಳೂರು ಕ್ಷೇತ್ರದಿಂದಲೇ ಮಾಡಿದ್ದರು. ತಾವು ಸಂಸದೆ ಕೂಡ ಆಗಿಲ್ಲದ ಆ ದಿನಗಳಲ್ಲಿ ಅವರು ಚಿಕ್ಕಮಗಳೂರಿಗೆ ಭೇಟಿ ಕೊಟ್ಟರು. ಅಂತೆಯೇ 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯನ್ನು ಅವರು ಪ್ರಚಂಡವಾಗಿ ಜಯಿಸಿದರು. ಆ ಚುನಾವಣೆಯಲ್ಲಿ ಅವರು ಜನತಾ ಪಕ್ಷದ ವೀರೇಂದ್ರ ಪಾಟೀಲರನ್ನು ಸೋಲಿಸಿದರು ಎಂದು ರಾಹುಲ್ ನೆನಪಿಸಿಕೊಂಡರು.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ಧಾಳಿ ಆರಂಭಿಸಿದ ರಾಹುಲ್ ಗಾಂಧಿ, “ನಮ್ಮ ದೇಶದ ಗಡಿಯಲ್ಲಿ, ಡೋಕ್ಲಾಂನಲ್ಲಿ ಚೀನ ಹೆಲಿಪ್ಯಾಡ್‌ಗಳನ್ನು, ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ; ಪ್ರದಾನಿ ಮೋದಿ ಇದನ್ನು ಕಂಡೂ ಮೌನವಾಗಿದ್ದಾರೆ. ಈ ದೇಶದ ಯಾವುದೇ ಪ್ರಮುಖ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ’ ಎಂದು ಹೇಳಿದರು.
“ಕಿಂಡರ್‌ಗಾರ್ಟನ್ ನಿಂದ ಸ್ನಾತಕೋತ್ತರ ಶಿಕ್ಷಣದ ವರೆಗೆ ಎಲ್ಲ ಹೆಣ್ಣು ಮಕ್ಕಳು ಕರ್ನಾಟಕದಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಗುಜರಾತ್‌ನಲ್ಲಿ ಶೇ.90ರಷ್ಟು ವಿದ್ಯಾಲಯಗಳನ್ನು ಖಾಸಗೀಕರಿಸಲಾಗಿದೆ ಮತ್ತು ಅಲ್ಲಿ ಪ್ರತಿಯೋರ್ವ ವಿದ್ಯಾರ್ಥಿಗೆ ಕಾಲೇಜು ಪದವಿ ಪಡೆಯಲು 15 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ’ ಎಂದು ರಾಹುಲ್ ಹೇಳಿದರು.
“ಭ್ರಷ್ಟಾಚಾರ ನಡೆಸಿದ ಜೈಲಿಗೆ ಹೋದ ತನ್ನದೇ ಪಕ್ಷದವರೊಂದಿಗೆ ವೇದಿಕೆ ಹಂಚಿಕೊಂಡು ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿಗ್ರಹದ ಬಗ್ಗೆ ಮಾತನಾಡುತ್ತಾರೆ. ಜನರು ಅವರಿಂದ ಸುಳ್ಳನ್ನು ಮತ್ತು ದ್ವೇಷದ ಭಾಷಣಗಳನ್ನು ಕೇಳಲು ಬಯಸುವುದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಒಗ್ಗಟ್ಟು ಮತ್ತು ಕಠಿನ ಪರಿಶ್ರಮದ ಫಲವಾಗಿ ನಾವು ಕರ್ನಾಟಕದ ಚುನಾವಣೆಯನ್ನು ಗೆಲ್ಲುವ ಭರವಸೆ ನನಗಿದೆ’ ಎಂದು ರಾಹುಲ್ ಹೇಳಿದರು.