Advertisement
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಜನತಾ ಕರ್ಫ್ಯೂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಜನತೆ ಬೆಳಗ್ಗೆಯಿಂದ ಸಂಜೆವರೆಗೂ ಮನೆಯಿಂದ ಹೊರ ಬರದೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು. ಪರಿಣಾಮ ಇಡೀ ಜಿಲ್ಲೆಯೇ ಭಾನುವಾರ ಸ್ತಬ್ಧವಾಗಿತ್ತು.
Related Articles
Advertisement
ವಾಹನವಿಲ್ಲದೆ ಪರದಾಡಿದ ಕುಟುಂಬ: ಜಿಲ್ಲೆಯ ಬಿಳಿಕೆರೆಯಲ್ಲಿ ಉದ್ಯೋಗಕ್ಕಾಗಿ ಒಡಿಸ್ಸಾದಿಂದ ಖಾಲಿ ರೈಲಿನಲ್ಲಿ ಮೈಸೂರಿಗೆ ಆಗಮಿಸಿದ ಕುಟುಂಬವೊಂದು ವಾಹನವಿಲ್ಲದೆ ಪರದಾಡಿತು. ಮೈಸೂರಿನಿಂದ ಬಿಳಿಕೆರೆಗೆ ಹೋಗಲಾರದೆ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಹುಣಸೂರು ರಸ್ತೆಯಲ್ಲಿ ಕಾದುಕುಳಿತರು. ಜನತಾ ಕರ್ಫ್ಯೂ ಆರಂಭವಾಗುವ ಮುನ್ನವೇ ಬಿಳಿಕೆರೆ ಸೇರಿಕೊಳ್ಳಬೇಕೆಂಬ ಉದ್ದೇಶದಿಂದ ಒಡಿಶಾದಿಂದ ಹೊರಟಿದ್ದ ಕುಟುಂಬ ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು.
ಬೆಳಗಿನ ಜಾವವೇ ಬೆಂಗಳೂರಿನಿಂದ ಖಾಲಿ ರೈಲಿನಲ್ಲಿ ಮೈಸೂರಿಗೆ ಆಗಮಿಸಿದರೂ, ಮೈಸೂರಿನಿಂದ ತೆರಳಲು ವಾಹನವಿಲ್ಲದೆ ರಸ್ತೆ ಬದಿಯಲ್ಲಿ ಕುಳಿತರು. ಬೆಂಗಳೂರಿನಿಂದ ಮುಂಜಾನೆಯೇ ಮೈಸೂರಿಗೆ ಆಗಮಿಸಿದ ಎರಡು ಕುಟುಂಬ ಚಾಮರಾಜ ನಗರಕ್ಕೆ ತೆರಳಲಾಗದೆ ಸಮಸ್ಯೆ ಅನುಭವಿಸಿತು. ಜೊತೆಗೆ ನಗರದಲ್ಲಿ ಅಂಗಡಿ, ಹೋಟೆಲ್ ಬಂದ್ ಆಗಿದ್ದರಿಂದ ಊಟ, ನೀರು ಇಲ್ಲದೆ ಪರಿತಪಿಸಿದರು. ಬಳಿಕ ಮೈಸೂರಿನಲ್ಲಿ ರೈಲು ನಿಲ್ಲಿಸಲು ಸ್ಥಳಾವಕಾಶವಿಲ್ಲದೇ ಚಾಮರಾಜ ನಗರಕ್ಕೆ ಹೋಗುತ್ತಿದ್ದ ತಿರುಪತಿ ಎಕ್ಸ್‌ಪ್ರೆàಸ್ ರೈಲುಗಾಡಿ ಮೂಲಕ ಹೊರಟರು.
ಜಿಲ್ಲೆ ಸಂಪೂರ್ಣ ಲಾಕ್‌ಡೌನ್: ಪ್ರತಿ ಭಾನುವಾರ ಸರ್ಕಾರಿ ನೌಕರರಿಗೆ ರಜೆ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು ಜನದಟ್ಟಣೆಯಿಂದ ಕೂಡಿರುತ್ತಿದ್ದವು. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದರಿಂದ ಇಡೀ ಜಿಲ್ಲಾದ್ಯಂತ ಜನ ಮನೆಯಲ್ಲೇ ಉಳಿದು ವಿಶ್ರಾಂತಿ ಪಡೆಯುವ ಮೂಲಕ ಸಂಪೂರ್ಣವಾಗಿ ಜನತಾ ಕರ್ಫ್ಯೂಗೆ ಬೆಂಬಲಿಸಿದರು.
ಬೆಳಗ್ಗೆಯಿಂದಲೂ ಸರ್ಕಾರಿ ಸಾರಿಗೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳೂ ರಸ್ತೆಗಳಿಗೆ ಇಳಿಯಲಿಲ್ಲ. ಹೋಟಲ, ಅಂಗಡಿ ಸೇರಿದಂತೆ ಜನತೆ ಸ್ವಯಂ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಮೈಸೂರು ನಗರದ ಎಲ್ಲಾ ರಸ್ತೆ ಹಾಗೂ ವೃತ್ತಗಳು ಮತ್ತು ವಾಣಿಜ್ಯ ಕೇಂದ್ರಗಳು ಖಾಲಿ ಖಾಲಿಯಾಗಿದ್ದವು. ಬೆಳಗ್ಗೆ ಬೆರಳೆಣಿಕೆಯಷ್ಟು ಜನರು ಕಂಡು ಬಂದರೆ, ಮಧ್ಯಾಹ್ನದ ವೇಳೆ ರಸ್ತೆಯುದ್ದಕ್ಕೂ ಒಬ್ಬರೇ ಒಬ್ಬ ವ್ಯಕ್ತಿಯೂ ಕಾಣಸಿಗಲಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಜನತೆ ಕೊರೊನಾ ವೈರಸ್‌ಗೆ ಮತ್ತಷ್ಟು ಆತಂಕಗೊಂಡು ದಿನವಿಡೀ ಮನೆಯಿಂದ ಹೊರ ಬರಲಿಲ್ಲ.
ಜಿಲ್ಲಾಡಳಿತ ಮುಂಚಿನಿಂದಲೂ ಹಲವು ಕಟ್ಟುನಿಟ್ಟಿನ ಕ್ರಮಕೈಗೊಂಡು ಪ್ರತಿಯೊಬ್ಬ ವಿದೇಶಿ ವ್ಯಕ್ತಿ ಮೇಲೆ ನಿಗಾ ಇರಿಸಿದೆ. ಅಲ್ಲದೇ, ವಿದೇಶದಿಂದ ಆಗಮಿಸಿದ ವ್ಯಕ್ತಿಗಳ ಆರೋಗ್ಯದ ಮೇಲೆಯೂ ಕಣ್ಣಿಟ್ಟಿದೆ. ನಗರದ ಕೇಂದ್ರಿಯ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜನ ಜಂಗುಳಿಯಿಂದ ತುಂಬಿರುತ್ತಿದ್ದ ನಗರದ ಬಡಾವಣೆ, ಮಾರುಕಟ್ಟೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಒಟ್ಟಿನಲ್ಲಿ ಮೈಸೂರು ಜಿಲ್ಲೆಯ ಜನತೆ ಜನತಾ ಕರ್ಫ್ಯೂಗೆ ಅಭೂತಪೂರ್ವವಾಗಿ ಸ್ಪಂದಿಸಿ ಕೊರೊನಾ ವೈರಸ್ ಹೊಡೆದೋಡಿಸಲು ಪಣತೊಟ್ಟರು.