Advertisement

ಬೆಂಬಲ ಬೆಲೆ ಯೋಜನೆಗೆ ಸಿಗದ ಬೆಂಬಲ

05:24 AM Jan 25, 2019 | |

ದಾವಣಗೆರೆ: 2018-19ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟಕ್ಕೆ ಕಳೆದ ಒಂದೂವರೆ ತಿಂಗಳಲ್ಲಿ ಕೇವಲ 199 ರೈತರು ಮಾತ್ರ ನೋಂದಾಯಿಸಿಕೊಂಡಿದ್ದಾರೆ!.

Advertisement

ಜಿಲ್ಲಾ ಟಾಸ್ಕ್ಕೋರ್ಸ ಸಮಿತಿ ಕಳೆದ ಡಿ. 4ರಿಂದ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಭತ್ತ ಖರೀದಿ ಪ್ರಕ್ರಿಯೆಗೆ ಆದೇಶ ನೀಡಿದ್ದು, ಮಾ. 31ರವರೆಗೆ ಖರೀದಿ ನಡೆಯಲಿದೆ. ಆದರೆ, ಈವರೆಗೆ ನೋಂದಾಯಿಸಿರುವ ರೈತರ ಸಂಖ್ಯೆ 200 ಕೂಡ ದಾಟಿಲ್ಲ. ಕ್ವಿಂಟಾಲ್‌ ಸಾಮಾನ್ಯ ಭತ್ತಕ್ಕೆ 1,750 ರೂ. ಹಾಗೂ ಗ್ರೇಡ್‌ ಎ ಭತ್ತಕ್ಕೆ 1,770 ರೂ. ನಿಗದಿಪಡಿಸಲಾಗಿದೆ.

ಭತ್ತ ಮಾರಾಟ ಮಾಡುವ ರೈತರ ಜೊತೆಗೆ ಭತ್ತ ಖರೀದಿಗೆ ಮುಂದಾಗುವ ಅಕ್ಕಿ ಗಿರಣಿ ಮಾಲೀಕರಿಗೆ ವಿಧಿಸಿರುವ ಷರತ್ತುಗಳು ನೇರವಾಗಿ ಇಡೀ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿರುವುದರಿಂದ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಗೆ ಈ ಕ್ಷಣಕ್ಕೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಸಿಗುವ ಲಕ್ಷಣವೂ ಕಾಣಿಸುತ್ತಿಲ್ಲ.

ಭತ್ತ ಮಾರಾಟ ಮಾಡಲು ಇಚ್ಛಿಸುವ ರೈತರು ಖರೀದಿ ಕೇಂದ್ರಗಳಲ್ಲಿ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕದೊಂದಿಗೆ 2018-19ನೇ ಸಾಲಿನಲ್ಲಿ ಎಷ್ಟು ಎಕರೆಯಲ್ಲಿ ಭತ್ತ ಬೆಳೆದಿದ್ದಾರೆಂಬ ಬಗ್ಗೆ ದಾಖಲೆಗಳನ್ನು ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸಲ್ಲಿಸಬೇಕು. ಪ್ರತಿಯೊಬ್ಬ ರೈತರಿಂದ 40 ಕ್ವಿಂಟಾಲ್‌ ಮಾತ್ರ ಖರೀದಿಸಲಾಗುತ್ತದೆ. ಹೊನ್ನಾಳಿ ತಾಲೂಕಿನಲ್ಲಿ 138, ದಾವಣಗೆರೆಯಲ್ಲಿ 40, ಹರಿಹರದಲ್ಲಿ 21 ರೈತರು ಭತ್ತದ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ.

ದಾವಣಗೆರೆ, ಚನ್ನಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ, ಹರಿಹರ, ಹೊನ್ನಾಳಿಯ ಟಿ.ಎ.ಪಿ.ಸಿ.ಎಂ.ಎಸ್‌. ಪ್ರಾಂಗಣದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ವಿಶ್ಲೇಷಣಾ ಪಟ್ಟಿಯಂತೆ ಪರಿಶೀಲಿಸಿದ ಭತ್ತವನ್ನು ಸಮೀಪದ ಅಕ್ಕಿಗಿರಣಿಗಳಲ್ಲಿ ಖರೀದಿ ಮಾಡಲಾಗುವುದು. ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿ ಮಾಡುವಂತಹ ಅಕ್ಕಿ ಗಿರಣಿ ಮಾಲೀಕರು ಭತ್ತ ಖರೀದಿಸಲು ಅಗತ್ಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅದರಂತೆ ದಾವಣಗೆರೆ ತಾಲೂಕಿನಲ್ಲಿ 5, ಹೊನ್ನಾಳಿಯಲ್ಲಿ 3, ಹರಿಹರದಲ್ಲಿ 2 ಅಕ್ಕಿ ಗಿರಣಿಯವರು ನೋಂದಣಿ ಮಾಡಿಸಿಕೊಂಡಿದ್ದಾರೆ.

Advertisement

ಭತ್ತ ಖರೀದಿಗೆ ನೋಂದಣಿ ಮಾಡಿಸಿಕೊಂಡಿರುವ ಅಕ್ಕಿಗಿರಣಿಗಳು ಗ್ಯಾರೆಂಟಿ ಮೊತ್ತ ಪಾವತಿಸಿದ ನಂತರವೇ ಭತ್ತ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಹೊನ್ನಾಳಿಯಲ್ಲಿ ಗ್ಯಾರೆಂಟಿ ಮೊತ್ತ ಪಾವತಿಸಿರುವ ಹಿನ್ನೆಲೆಯಲ್ಲಿ 39 ರೈತರಿಗೆ ಸಮೀಪದ ಅಕ್ಕಿಗಿರಣಿಗೆ ಭತ್ತ ಕೊಂಡೊಯ್ಯಲು ತಿಳಿಸಲಾಗಿದೆ. ಭತ್ತ ಮಾರಾಟ ಮಾಡುವಂತಹವರು ತಮಗೆ ಅನುಕೂಲವಾದಾಗ ಭತ್ತ ಕೊಂಡೊಯ್ದು, ಮಾರಾಟ ಮಾಡುವ ಮುಕ್ತ ಅವಕಾಶ ಮಾಡಿಕೊಡಲಾಗಿದೆ.

ಹೊನ್ನಾಳಿ ಹೊರತುಪಡಿಸಿದರೆ ಇನ್ನುಳಿದ ತಾಲೂಕಿನ ಅಕ್ಕಿ ಗಿರಣಿ ಮಾಲೀಕರು ಇನ್ನೂ ಗ್ಯಾರೆಂಟಿ ಮೊತ್ತ ಪಾವತಿಸಿಲ್ಲ. ಹಾಗಾಗಿ ದಾವಣಗೆರೆ, ಹರಿಹರ ತಾಲೂಕಿನಲ್ಲಿ ಒಂದೇ ಒಂದು ಭತ್ತದ ಕಾಳು ಅಕ್ಕಿ ಗಿರಣಿಗೆ ಹೋಗಿಲ್ಲ.

ಬೆಂಬಲ ಬೆಲೆ ಯೋಜನೆಯಡಿ ಏನೇನೋ ಪಡಬಾರದ ಪಡಿಪಾಟಲು ಪಟ್ಟು 40 ಕ್ವಿಂಟಾಲ್‌ ಮಾತ್ರ ಮಾರಾಟ ಮಾಡಿದರೆ ಇನ್ನುಳಿದ ಭತ್ತವನ್ನು ಬೇರೆ ಕಡೆಗೆ ಮಾರಾಟ ಮಾಡಲೇಬೇಕಾಗುತ್ತದೆ. ಅಲ್ಲಿ ಇಲ್ಲಿ ಮಾರುವ ಉಸಾಬರಿಯೇ ಬೇಡ ಎಂದು ಅನೇಕ ರೈತರು ಮುಕ್ತ ಮಾರ್ಕೆಟ್, ದಲ್ಲಾಳಿಗಳತ್ತ ಮುಖ ಮಾಡುತ್ತಿದ್ದಾರೆ.

ಕಳೆದ ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಇತ್ತು. ನಿರೀಕ್ಷೆಗೂ ಮೀರಿ 46,148 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ದಾವಣಗೆರೆ ತಾಲೂಕಿನಲ್ಲಿ 12,600 ಹೆಕ್ಟೇರ್‌ ಗುರಿಯಲ್ಲಿ 16,590 ಹೆಕ್ಟೇರ್‌, ಹರಿಹರದಲ್ಲಿ 12,300 ಹೆಕ್ಟೇರ್‌ಗೆ ಗುರಿಗೆ 10,260 ಹೆಕ್ಟೇರ್‌, ಹರಪನಹಳ್ಳಿ(ಈಗ ಬಳ್ಳಾರಿ ಜಿಲ್ಲೆ) 800 ಹೆಕ್ಟೇರ್‌ಗೆ 2,050, ಹೊನ್ನಾಳಿಯಲ್ಲಿ 3,300 ಹೆಕ್ಟೇರ್‌ ಗುರಿಗೆ 8,785 ಹೆಕ್ಟೇರ್‌, ಚನ್ನಗಿರಿಯಲ್ಲಿ 7 ಸಾವಿರ ಹೆಕ್ಟೇರ್‌ ಪ್ರದೇಶ ಗುರಿಗೆ 8,150 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ.

ಈಗಾಗಲೇ ಕಳೆದ ಹಂಗಾಮಿನಲ್ಲಿ ಬೆಳೆದಿರುವ ಶೇ. 90ಕ್ಕಿಂತಲೂ ಹೆಚ್ಚು ಭತ್ತ ಮಾರಾಟವಾಗಿದೆ ಮಾತ್ರವಲ್ಲ, ರೈತರು ಬೇಸಿಗೆ ಭತ್ತಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲವನ್ನೂ ನೋಡಿದರೆ ಸರ್ಕಾರದ ಬೆಂಬಲ ಬೆಲೆ ಯೋಜನೆ ಸಂಪೂರ್ಣ ಫ್ಲಾಪ್‌… ಎನ್ನುವಂತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next