Advertisement

ಮದ್ಯಮುಕ್ತ ಕರ್ನಾಟಕಕ್ಕೆ ಬೆಂಬಲ: ಶಾಸಕ ಬಂಗೇರ

04:38 PM Oct 03, 2017 | Team Udayavani |

ಬೆಳ್ತಂಗಡಿ : ಮದ್ಯಮುಕ್ತರಾಗುವುದೇ ಗಾಂಧೀಜಿಗೆ ನಾವು ಸಲ್ಲಿಸುವ  ನಿಜವಾದ ಕೃತಜ್ಞತೆ. ಅರ್ಹತೆ ಇದ್ದವರು ಗಾಂಧಿ ಜಯಂತಿ ಆಚರಣೆ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಜನಜಾಗೃತಿ ವೇದಿಕೆಯಿಂದ ನಿಜವಾದ ಕಾಳಜಿಯ ಕಾರ್ಯಕ್ರಮ ಮದ್ಯಮುಕ್ತ ಕರ್ನಾಟಕ ನಿರ್ಮಾಣ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಹೇಳಿದರು.

Advertisement

ಅವರು ಸೋಮವಾರ ಇಲ್ಲಿನ ಸಂತೆಕಟ್ಟೆಯ ಎಸ್‌. ಡಿ. ಎಂ. ಹಾಲ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆದ ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತರ ಅಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .

ಮದ್ಯ ಕುಟುಂಬಕ್ಕೆ ಹಾನಿ ಮಾಡುತ್ತದೆ. ಜತೆಗೆ ಸಮಾಜವನ್ನು ಹಾಳು ಮಾಡುತ್ತದೆ. ಮದ್ಯ ಒಳಿತನ್ನು ಮಾಡಲು ಸಾಧ್ಯವಿಲ್ಲ. ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದೂ ಮಾಡುವವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ, ನನಗೆ ಯಕ್ತಿಕವಾಗಿ ನಷ್ಟವಾದರೂ ಚಿಂತೆಯಿಲ್ಲ. ಆದರೆ ಮದ್ಯ ಮುಕ್ತ ಕರ್ನಾಟಕ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ. ಜನರ ಸಂಪಾದನೆ ಮದ್ಯದ ಮೂಲಕ ದುರ್ವ್ಯಸನಕ್ಕೆ ಹೋಗುತ್ತದೆ ಎಂದೇ ಡಾ| ಹೆಗ್ಗಡೆಯವರು ಜನಜಾಗೃತಿ ವೇದಿಕೆ ಮಾಡಿದರು. ಈಗ ಬಿಪಿಎಲ್‌ ಹಂತದಿಂದ ಎಲ್ಲರೂ ಮೇಲೆ ಬರಬೇಕೆಂದು ಸವಲತ್ತು ನೀಡಲಾಗುತ್ತಿದೆ. ಆದರೆ ಮದ್ಯವ್ಯಸನವಿದ್ದರೆ ಬಡತನ ರೇಖೆಯಿಂದ ಮೇಲೆ ಬರಲಾಗದು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌. ಎಚ್‌. ಮಂಜುನಾಥ್‌, ಕರ್ನಾಟಕ ಮದ್ಯಮುಕ್ತ ರಾಜ್ಯವಾಗಬೇಕು. ಬಿಹಾರ ಕೂಡ ಇಂತಹ ಹೆಜ್ಜೆ ಇಟ್ಟಿದೆ. ಮದ್ಯದಿಂದ ಬರುವ ಆದಾಯಕ್ಕಿಂತ ಹೆಚ್ಚು ಆದಾಯ ಮದ್ಯಮುಕ್ತ ರಾಜ್ಯದಲ್ಲಿ ಕೂಡ ದೊರೆಯುತ್ತದೆ. ಅಂತಹ ಭರವಸೆ ನೀಡುವವರಿಗೆ ಮತ ಹಾಕುವ ಸಂಕಲ್ಪ ಮಾಡಬೇಕು. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಇದನ್ನು ನಮೂದಿಸಬೇಕು ಎಂದರು.

Advertisement

ಮೂರು ಪಕ್ಷಗಳ ಪ್ರತಿನಿಧಿಗಳಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ಮದ್ಯಮುಕ್ತ ಕರ್ನಾಟಕ ಸ್ಥಾಪನೆ ಭರವಸೆಗೆ ಆಗ್ರಹಿಸಿ ಮನವಿಯನ್ನು ನೀಡಲಾಯಿತು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜ, ಜಾತ್ಯತೀತ ಜನತಾದಳ ಅಧ್ಯಕ್ಷ ಪ್ರವೀಣ್‌ ಚಂದ್ರ ಜೈನ್‌ ಮಾತನಾಡಿದರು.

ಜ.ವೇ. ಮಾಜಿ ಅಧ್ಯಕ್ಷರಾದ ಪಿ.ಕೆ. ರಾಜು ಪೂಜಾರಿ, ವಸಂತ ಸಾಲಿಯಾನ್‌, ತಿಮ್ಮಪ್ಪ ಗೌಡ ಬೆಳಾಲು, ವೆಂಕಟ್ರಾಯ ಅಡೂರು, ಪ್ರತಾಪಸಿಂಹ ನಾಯಕ್‌, ಅಬ್ದುಲ್‌ ರಹಿಮಾನ್‌, ಪ್ರಗತಿಬಂಧು ತಾಲೂಕು ಒಕ್ಕೂಟದ ಅಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷರು ಉಪಸ್ಥಿತರಿದ್ದರು. ಅ.ಕ.ಜ.ವೇ. ಕಾರ್ಯದರ್ಶಿ ವಿವೇಕ್‌ ವಿನ್ಸೆಂಟ್‌ ಪಾಯಸ್‌ ಪ್ರಸ್ತಾವಿಸಿದರು. ಜ.ವೇ. ತಾಲೂಕು ಅಧ್ಯಕ್ಷ ಬೇಬಿ ಚೆರಿಯನ್‌ ಸ್ವಾಗತಿಸಿ, ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಯೋಜನೆಯ ಕೃಷಿ ಅಧಿಕಾರಿ ಉಮೇಶ್‌ ನಿರ್ವಹಿಸಿದರು. ಡಿಸಿಸಿ ಬ್ಯಾಂಕ್‌ ಬಳಿಯಿಂದ ಜನಜಾಗೃತಿ ಜಾಥಾ ನಡೆಯಿತು. ಮಾಜಿ ಅಧ್ಯಕ್ಷ ಕಿಶೋರ್‌ ಹೆಗ್ಡೆ ಉದ್ಘಾಟಿಸಿದರು.

ಸಿಎಂಗೆ ಮನವರಿಕೆ
ಪಾನನಿಷೇಧಕ್ಕೆ ನನ್ನ ಬೆಂಬಲ ಇದ್ದು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುತ್ತೇನೆ ಹಾಗೂ ವಿಧಾನಸಭೆಯಲ್ಲೂ ಪ್ರಸಾವಿಸಲಿದ್ದೇನೆ. ಮದ್ಯ ಮಾರಾಟದಿಂದ ರಾಜ್ಯಕ್ಕೆ 18 ಸಾವಿರ ಕೋ.ರೂ. ಆದಾಯವಿದೆ. ಆದರೆ ಇದೇ ಆದಾಯದಿಂದ ರಾಜ್ಯದ ಅಭಿವೃದ್ಧಿ ಆಗುವುದಲ್ಲ. ಬದಲಿ ವ್ಯವಸ್ಥೆ ಮಾಡಬಹುದು ಎಂದು ಸಿಎಂಗೆ ಮನವರಿಕೆ ಮಾಡುತ್ತೇನೆ.
ಕೆ. ವಸಂತ ಬಂಗೇರ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next