Advertisement

ಕೆಎಫ್‌ಡಿ ನಿಯಂತ್ರಣಕ್ಕೆ ಸಹಕರಿಸಿ: ಡಿಸಿ

11:48 AM Feb 05, 2019 | |

ಶಿವಮೊಗ್ಗ: ಜಿಲ್ಲೆಯ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ನಗರದ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ತಿಳಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಸೋಮವಾರ ನಗರದ ಎಲ್ಲ ಪ್ರಮುಖ ಆಸ್ಪತ್ರೆಗಳ ವೈದ್ಯಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಂಗನಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಹಾಗೂ ರೋಗ ನಿಯಂತ್ರಣದಲ್ಲಿ ಖಾಸಗಿ ಸಹಭಾಗಿತ್ವದ ಅಗತ್ಯ ಕುರಿತು ಅವರು ಮಾತನಾಡಿದರು.

3 ತಾಲೂಕುಗಳ ಸುಮಾರು 2 ಲಕ್ಷ ಜನರು ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಎಲ್ಲರಿಗೂ ಸಾಕಾಗುವಷ್ಟು ಪ್ರಮಾಣದಲ್ಲಿ ಡಿಎಂಪಿ ತೈಲ ಲಭ್ಯವಿದೆ. ಐಎಂಎ ಹಾಗೂ ಖಾಸಗಿ ಆಸ್ಪತ್ರೆಗಳು ಪ್ರಥಮ ಹಂತದಲ್ಲಿ ಕನಿಷ್ಟ ನಾಲ್ಕು ಸಂಚಾರಿ ಚಿಕಿತ್ಸಾ ಘಟಕಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಎಂದರು.

ಜ್ವರ ಸೇರಿದಂತೆ ಮಂಗನ ಕಾಯಿಲೆ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರದೇಶಗಳ ರೂಟ್ ಮ್ಯಾಪ್‌ ಸಿದ್ಧಪಡಿಸಲಾಗುವುದು. ಖಾಸಗಿ ಆಸ್ಪತ್ರೆಗಳು ಒದಗಿಸುವ ಸಂಚಾರಿ ಘಟಕಗಳು ಈ ವ್ಯಾಪ್ತಿಯಲ್ಲಿ ಚಿಕಿತ್ಸೆ ನೀಡಲಿವೆ. ಈ ಕುರಿತು ಮುಂಚಿತವಾಗಿ ಆಯಾ ಗ್ರಾಮಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಈ ಸಂಚಾರಿ ಘಟಕದಲ್ಲಿ ಎಂಬಿಬಿಎಸ್‌ ವೈದ್ಯಾಧಿಕಾರಿ, ಸಹಾಯಕ ಸಿಬ್ಬಂದಿ ಹಾಗೂ ಕನಿಷ್ಠ ಔಷಧ ಸಾಮಗ್ರಿಗಳು ಹೊಂದಿರಬೇಕು. ತಪಾಸಣೆ ಬಳಿಕ ಒಳರೋಗಿಯಾಗಿ ದಾಖಲಿಸಿಕೊಳ್ಳುವ ಕುರಿತು ಶಿಫಾರಸು ಮಾಡಿದರೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಸುಬ್ಬಯ್ಯ ಹಾಗೂ ಸಹ್ಯಾದ್ರಿ ನಾರಾಯಣ ಹೃದಯಾಲಯದ ವತಿಯಿಂದ ಎರಡು ಸಂಚಾರಿ ಘಟಕ ಒದಗಿಸಲಾಗುವುದು ಎಂದು ಸಭೆಯಲ್ಲಿ ಸಂಬಂಧಪಟ್ಟ ಆಸ್ಪತ್ರೆಗಳ ಅಧಿಕಾರಿಗಳು ತಿಳಿಸಿದರು. ಇನ್ನುಳಿದಂತೆ ಐಎಂಎ ಸಮನ್ವಯದೊಂದಿಗೆ ಒಂದೆರಡು ದಿನಗಳಲ್ಲಿ ಸಂಚಾರಿ ಘಟಕಗಳನ್ನು ಒದಗಿಸುವುದು ಹಾಗೂ ವೈದ್ಯಾಧಿಕಾರಿಗಳ ಸೇವೆ ಒದಗಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ಆಸ್ಪತ್ರೆಗಳ ಪ್ರತಿನಿಧಿಗಳು ಹೇಳಿದರು.

ಎಡಿಸಿ ಅನುರಾಧಾ, ಡಿಎಚ್ಒ ರಾಜೇಶ್‌ ಸುರಗಿಹಳ್ಳಿ, ಐಎಂಎ ಅಧ್ಯಕ್ಷ ಡಾ| ಪಿ.ಕೆ. ಪೈ, ಡಾ| ಎಚ್.ಆರ್‌. ದೇವೇಂದ್ರಪ್ಪ, ಮ್ಯಾಕ್ಸ್‌ ಆಸ್ಪತ್ರೆಯ ಡಾ| ಹರೀಶ್‌, ಡಾ| ಧನಂಜಯ ಸರ್ಜಿ, ಸಹ್ಯಾದ್ರಿ ಆಸ್ಪತ್ರೆ ನಿರ್ದೇಶಕ ಪ್ರಶಾಂತ್‌ ದೇಸಾಯಿ, ಡಾ| ಸುಜಿತ್‌, ಇತರೆ ಪ್ರಮುಖ ಆಸ್ಪತ್ರೆಗಳ ಪ್ರತಿನಿಧಿಗಳು ಇದ್ದರು.

•ಮಂಗನಕಾಯಿಲೆ ಕಾಣಿಸಿಕೊಳ್ಳುವ ಪ್ರದೇಶದ ರೂಟ್ಮ್ಯಾಪ್‌ ಸಿದ್ಧ

•ಆರಂಭದ ಹಂತದಲ್ಲಿ ಮಂಗನ ಕಾಯಿಲೆ ದೃಢಪಟ್ಟರೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯ

•ಸುಬ್ಬಯ್ಯ, ಸಹ್ಯಾದ್ರಿ ನಾರಾಯಣ ಹೃದಯಾಲಯದ ವತಿಯಿಂದ ಎರಡು ಸಂಚಾರಿ ಘಟಕ ಆರಂಭಿಸಲು ಒಪ್ಪಿಗೆ

ಡಿಸಿ ದಿಢೀರ್‌ ಭೇಟಿ
ಮಂಗನ ಕಾಯಿಲೆ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಡಿಸಿ ಕೆ.ಎ. ದಯಾನಂದ್‌ ಸೋಮವಾರ ಬೆಳಗ್ಗೆ ದಿಢೀರ್‌ ಭೇಟಿ ನೀಡಿ ರೋಗ ಚಿಕಿತ್ಸೆ ಹಾಗೂ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ, ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ, ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next