Advertisement

ಚುನಾವಣಾ ಕಾವು: ಉತ್ತರ ಪ್ರದೇಶದ ಸಿ.ಎಂ ಯೋಗಿ ಭೇಟಿಯಾದ ಕೆ.ಎಂ ಮುನಿಯಪ್ಪ

06:42 PM Mar 21, 2023 | Team Udayavani |

ಕೊರಟಗೆರೆ: 2023 ರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕೂಡಾ ಏರುತ್ತಿದೆ. ಶಾಸಕ ಪಟ್ಟವನ್ನು ಪಡೆಯಲೇಬೇಕು ಎಂಬ ಮಹದಾಸೆಯಿಂದ ಪಕ್ಷದ ಹಿರಿಯ ನಾಯಕರ ಮೇಲೆ ಆಕಾಂಕ್ಷಿಗಳು ಮೇಲಿಂದ ಮೇಲೆ ಒತ್ತಡ ಹಾಕುತ್ತಿರುವುದು ಕಂಡು ಬರುತ್ತಿದೆ.

Advertisement

ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೂ ಕೂಡಾ ಪ್ರತಿಷ್ಠೆಯ ಕಣವಾಗಿದೆ.

ಹೌದು, ಕೊರಟಗೆರೆ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದು ಶತಾಯ-ಗತಾಯ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕು ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಒಂದಿಲ್ಲೊಂದು ತಂತ್ರವನ್ನು ಹೆಣೆಯುತ್ತಿದ್ದಾರೆ. ಆದರೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಹಿರಿಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಆದರೆ, ಕೊರಟಗೆರೆ ಕ್ಷೇತ್ರದಿಂದ ಕೆ.ಎಂ ಮುನಿಯಪ್ಪ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದ್ದು, ಮುನಿಯಪ್ಪ ಹಾಗೂ ತಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಜೊತೆ ಮಾತುಕತೆ ನಡೆಸಿದ್ದು, ಬಹುತೇಕ ಕೆ.ಎಂ ಮುನಿಯಪ್ಪನವರಿಗೆ ಬಿಜೆಪಿ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

ಕೆ.ಎಂ ಮುನಿಯಪ್ಪ ಮಾಜಿ ಸಿಎಂ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದು, ಕೊರಟಗೆರೆ ಕ್ಷೇತ್ರದ ಮೂಲೆ ಮೂಲೆಯನ್ನು ಬಿಡದೆ ಜನರ ವಿಶ್ವಾಸ ಗೆದ್ದಿದ್ದಾರೆ. ಆದ್ದರಿಂದ ಕ್ಷೇತ್ರದ ಜನರು ಬಿಜೆಪಿ ಪಕ್ಷದಿಂದ ಮುನಿಯಪ್ಪನವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯದ ಮಾತುಗಳು ಕೇಳಿ ಬರುತ್ತಿವೆ.

Advertisement

ಕೆ.ಎಂ ಮುನಿಯಪ್ಪನವರು ತಮ್ಮ ಕ್ಷೇತ್ರದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಿ ನೂರಾರು ಯುವ ಜನತೆಗೆ ಕೆಲಸ ಕೊಡಿಸುವುದರ ಮೂಲಕ ಬಡವರ ಬಾಳಿಗೆ ಬೆಳಕು ನೀಡಿದ್ದಾರೆ.

ಕ್ಷೇತ್ರದ ಯುವ ಜನತೆಯ ಉತ್ತಮ ಭವಿಷ್ಯ ನಿರ್ಮಾಣದ ಕನಸ್ಸನ್ನು ಹೊತ್ತಿರುವ ಮುನಿಯಪ್ಪ ಹಾಗೂ ಬಿಜೆಪಿ ಯುವ ಮುಖಂಡ ಚೇತನ್ ಮುನಿಯಪ್ಪನವರು ಈಗಾಗಲೇ ಕ್ಷೇತ್ರದ ಬಡ ವರ್ಗದ ಜನರಿಗೆ ಹಲವು ರೀತಿಯಾಗಿ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

ಮುನಿಯಪ್ಪನವರು ಈಗಾಗಲೇ ಕೊರಟಗೆರೆ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಜನರ ಕಷ್ಟ ಸುಖದಲ್ಲಿ ಭಾಗವಹಿಸಿ ಜನರ ವಿಶ್ವಾಸ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದ್ದು, ಮುನಿಯಪ್ಪನವರೇ ಶಾಸಕರಾಗಬೇಕು ಎಂಬುದು ಕ್ಷೇತ್ರದ ಜನರ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮುನಿಯಪ್ಪನವರ ಅಭಿಮಾನಿಗಳ ಆಶಯ ಆಗಿದೆ.

ಮುನಿಯಪ್ಪನವರಿಗೆ ಕೊರಟಗೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದ್ದೇ ಆದಲ್ಲಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಕ್ಷೇತ್ರದ ಜನರ ಪ್ರೀತಿ ಹಾಗೂ ವಿಶ್ವಾಸ ಪಡೆದಿರುವ ಮುನಿಯಪ್ಪನವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ಬಿಜೆಪಿ ನಾಯಕರ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ.

ನಾನು ಕೊರಟಗೆರೆ ಕ್ಷೇತ್ರದಲ್ಲಿ ನಾಲ್ಕೂ ವರ್ಷಗಳಿಂದ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಪ್ರತಿ ಮನೆಯ ಸದಸ್ಯರ ಕಷ್ಟಗಳನ್ನ ಮನೆ ಮಗನಂತೆ ಆಲಿಸಿದ್ದೇನೆ. ಹಬ್ಬ ಹರಿದಿನಗಳು ಬಂದಾಗ ನನ್ನ ಮನೆಯ ಅಕ್ಕತಂಗಿಯರಿಗೆ ಉಡುಗೊರೆ ಕೊಡುವ ಹಾಗೆ ಗ್ರಾಮದ ಹೆಣ್ಣು ಮಕ್ಕಳಿಗೆ ಬಾಗಿನ ಕೊಟ್ಟಿದ್ದೇನೆ. ಕೊರೋನಾ ಸಂದರ್ಭದಲ್ಲಿ ಕ್ಷೇತ್ರದ ಕಟ್ಟಕಡೆಯ ಗ್ರಾಮದವರೆಗೆ ದಿನಸಿ ಪದಾರ್ಥಗಳನ್ನು ತಲುಪಿಸಿದ್ದೇನೆ. ಕ್ಷೇತ್ರದಲ್ಲಿ ಉಳಿದು ಜನರ ಸಮಸ್ಯೆಗಳನ್ನು ಆಲಿಸುತ್ತಾ ಎಲ್ಲರ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾ ಇದೀಗ ಕ್ಷೇತ್ರದ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ತಂದೆ ತಾಯಂದಿರು ಕಷ್ಟಪಟ್ಟು ಓದಿಸಿ ದೊಡ್ಡವರನ್ನಾಗಿ ಮಾಡಿದ್ದಾರೆ. ವಿದ್ಯಾರ್ಥಿಗಳು ಮನೆಯಲ್ಲಿ ಕೂತಿದ್ದಾರೆ. ಎಲ್ಲರಿಗೂ ಏನಾದರೂ ಮಾಡಿ ಕೆಲಸ ಕೊಡಿಸಬೇಕು ಎನ್ನುವ ಒಂದು ಆಶಯದಿಂದ ಈ ಉದ್ಯೋಗ ಮೇಳವನ್ನು ಆಯೋಜಿಸಿದ್ದೇನೆ. ಈ ಉದ್ಯೋಗ ಮೇಳದಲ್ಲಿ ನಮ್ಮ ಕ್ಷೇತ್ರದವರಲ್ಲದೆ ಜಿಲ್ಲೆಯ ನಾನಾ ಭಾಗದಿಂದ ಹತ್ತು ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವಕ ಯುವತಿಯರು ಪಾಲ್ಗೊಂಡು ಸುಮಾರು 60 ಕಂಪನಿಗಳಲ್ಲಿ ಕೆಲಸ ಸಿಕ್ಕಿದೆ. ಇದೀಗ ಆ ಬಡ ತಂದೆ ತಾಯಿಗಳಿಗೆ ಮಕ್ಕಳು ಆಸರೆಯಾಗಿದ್ದಾರೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಇದಿಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನನ್ನಿಂದಾಗುವ ಎಲ್ಲ ಸೌಕರ್ಯಗಳನ್ನು ನನ್ನ ಕ್ಷೇತ್ರದ ಜನತೆಗೆ ಒದಗಿಸಿಕೊಡುವುದೇ ನನ್ನ ಮೂಲ ಉದ್ದೇಶ.
– ಕೆ.ಎಂ.ಮುನಿಯಪ್ಪ, ಬಿಜೆಪಿ ಟಿಕೆಟ್ ಆಕಾಂಕ್ಷಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವರಿಷ್ಠರ ಮಾಹಿತಿ ಮೇರೆಗೆ ಕೊರಟಗೆರೆ ಕ್ಷೇತ್ರದಲ್ಲಿ ಇದುವರೆಗೂ ಅಧಿಕೃತವಾಗಿ ಯಾವುದೇ ಅಭ್ಯರ್ಥಿಯ ಹೆಸರು ಘೋಷಣೆ ಆಗಿಲ್ಲ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸುವವರಿಗೆ ಟಿಕೆಟ್ ನೀಡಲಾಗುವುದು ಎಂದು ವರಿಷ್ಠರ ಮಾಹಿತಿ ಮೇರೆಗೆ ತಿಳಿಸಿದರು. ಕ್ಷೇತ್ರದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿ ಮಾಡಿಕೊಳ್ಳದೇ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ತಮ್ಮ ಕೆಲಸ ಮುಂದುವರೆಸಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ನೀಡಬೇಕು. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಅಭ್ಯರ್ಥಿಯ ಘೋಷಣೆ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ತಿಳಿಸಿದರು.

ಕೇಂದ್ರ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ ಅವರನ್ನು ಭೇಟಿ ಮಾಡಿದ ಕೆ. ಎಂ ಮುನಿಯಪ್ಪ ರವರು ಕ್ಷೇತ್ರದ ರಾಜಕೀಯ ಚಟುವಟಿಕೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿ ಹೆಸರು ಅಧಿಕೃತವಾಗಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಬಿಜೆಪಿ ಗೆಲುವು ಸಾಧಿಸಲು ಪ್ರತಿಯೊಬ್ಬರು ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆಂದು ಕೆ.ಎಂ ಮುನಿಯಪ್ಪ ತಿಳಿಸಿದರು.

ಇದನ್ನೂ ಓದಿ: 10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next