Advertisement

ವಿಧಾನಸೌಧದಲ್ಲೇ ಕನ್ನಡಕ್ಕಿಲ್ಲ ಬೆಂಬಲ

12:54 PM May 07, 2019 | Suhan S |

ಬ್ಯಾಡಗಿ: ಕನ್ನಡಕ್ಕೆ ವಿಧಾನಸೌಧದಲ್ಲೇ ಬೆಂಬಲ ಸಿಗುತ್ತಿಲ್ಲ. ರಾಜ್ಯದಲ್ಲಿ ಕನ್ನಡ ಉಳಿಸಿ-ಬೆಳೆಸುವಲ್ಲಿ ನಿರಂತರ ಹೋರಾಟ ಮುಂದುವರೆದಿದ್ದರೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಹೊರಟಿರುವ ಸರ್ಕಾರವೇ ಕನ್ನಡಕ್ಕೆ ಕೊನೆ ಮೊಳೆ ಹೊಡೆಯುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್‌.ಬಿ. ತವರದ ಹೇಳಿದರು.

Advertisement

ಪಟ್ಟಣದ ಸ್ವಾತಂತ್ರ್ಯ ಯೋಧರ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 104ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ಮೂಲಕ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ? ಸರ್ಕಾರ ತನ್ನ ನಿರ್ಧಾರವನ್ನು ಮತ್ತೂಮ್ಮೆ ಪರಿಶೀಲನೆ ನಡೆಸಲಿ ಎಂದು ಒತ್ತಾಯಿಸಿದರು.

ಸ್ವಂತ ಲಿಪಿ ಹೊಂದಿರುವ ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿನ ಅತ್ಯಂತ ಪುರಾತನ ಭಾಷೆ ಎಂದು ಗುರುತಿಸಿಕೊಂಡಿದೆ. ಕನ್ನಡದ 8 ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆಯುವ ಭಾಷೆಯ ಶ್ರೇಷ್ಠತೆಯನ್ನು ವಿಶ್ವಕ್ಕೆ ಸಾರಿದ್ದಾರೆ. ಇದೀಗ ಒಂದು ಸಾವಿರ ಇಂಗ್ಲಿಷ್‌ ಶಾಲೆಗಳನ್ನು ತೆರೆಯುವ ಮೂಲಕ ಕನ್ನಡದ ಅವನತಿಗೆ ಸರ್ಕಾರವೇ ಮುನ್ನುಡಿ ಬರೆಯುತ್ತಿರುವುದು ದುರಂತ ಎಂದರು.

ಡಾ| ಎಸ್‌.ಜಿ. ವೈದ್ಯ ಮಾತನಾಡಿ, ವಿಶ್ವದಲ್ಲಿ 2 ಸಾವಿರಕ್ಕೂ ಅಧಿಕ ಭಾಷೆಗಳಿದ್ದು, ಅದರಲ್ಲಿ ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಕನ್ನಡ 9ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ರಾಜ್ಯದ ಪ್ರತಿ ಗ್ರಾಮದಿಂದ ಹಿಡಿದು ದೇಶ ವಿದೇಶಗಳಲ್ಲಿ ಕನ್ನಡ ಭಾಷೆಯ ಸಂಘ ಸಂಸ್ಥೆಗಳಿದ್ದು, ಸುಮಾರು 3.5 ಲಕ್ಷ ಆಜೀವ ಸದಸ್ಯರಿದ್ದಾರೆ. ಕಳೆದ 1905 ರಲ್ಲಿ ಜನ್ಮ ತಳಿದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿವಿಗೆ ಹೋರಾಟ ನಡೆಸುತ್ತಿದ್ದರೆ, ಇತ್ತ ರಾಜ್ಯ ಸರ್ಕಾರ ಇಂಗ್ಲಿಷ್‌ ಮಾಧ್ಯಮದ ಶಾಲೆ ಆರಂಭಿಸಲು ಮುಂದಾಗುವ ಮೂಲಕ ದ್ರೋಹವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಜೀವರಾಜ ಛತ್ರದ ಮಾತನಾಡಿ, ಕನ್ನಡ ಭಾಷೆ, ನೆಲ-ಜಲ ಹಾಗೂ ಸಂಸ್ಕೃತಿ ಉಳಿವಿಗಾಗಿ ಕಳೆದ 104 ವರ್ಷಗಳಿಂದ ಟೊಂಕಕಟ್ಟಿ ನಿಂತಿರುವ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಉಳಿಸುವ ಹೋರಾಟ ನಿರಂತವಾಗಿ ನಡೆಯಲಿದೆ ಎಂದರು.

Advertisement

ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ರಂಗಭೂಮಿ ಕಲಾವಿದ ಮಾಸ್ಟರ್‌ ಹಿರಣ್ಣಯ್ಯ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ತಾಲೂಕಾಧ್ಯಕ್ಷ ಬಿ.ಎಂ.ಜಗಾಪೂರ, ಡಾ|ಎಸ್‌.ಎನ್‌.ನಿಡಗುಂದಿ, ಪಾಂಡುರಂಗ ಸುತಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಈರಣ್ಣ ಬೈರಾಪೂರ ಪ್ರಾರ್ಥಿಸಿದರು. ರಾಜಶೇಖರಪ್ಪ ಸ್ವಾಗತಿಸಿದರು. ಐ.ಬಿ.ಮುದಿಗೌಡ್ರ ನಿರೂಪಿಸಿದರು. ಎ.ಬಿ.ತಳಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next