ಮೈಸೂರು: ಕೊರೊನಾ ವೈರಾಣು ಕಾಯಿಲೆ ಹರಡುವಿಕೆ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಸ್ವಾಗತಿಸಿ, ಹತ್ತಾರು ಸಂಘಟನೆಗಳು ಬೆಂಬಲ ನೀಡಿರುವುದರಿಂದ ಭಾನುವಾರ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶಃ ಸ್ತಬ್ಧವಾಗಲಿದೆ.
ಜನತಾ ಮೈಸೂರು ವೇದಿಕೆಯಡಿ ಮೈಸೂರು ಹೋಟೆಲ್ ಮಾಲೀಕರ ಸಂಘ, ವರ್ತಕರ ಸಂಘ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಸಂಘ, ಯೋಗ ಅಸೋಸಿಯೇಷನ್, ನಂದಿನಿ ಹಾಲು ಮಾರಾಟಗಾರರ ಸಂಘ, ಭಾರತೀಯ ಕೈಗಾರಿಕೆಗಳ ಒಕ್ಕೂಟ, ಪೆಟ್ರೋಲ್ ಬಂಕ್ ಮಾಲೀಕರ ಸಂಘ, ಟೀ ಸ್ಟಾಲ್ ಅಸೋಸಿಯೇಷನ್, ಫುಟ್‌ಪಾತ್ ಹೋಟೆಲ್ ಮತ್ತು ಅಂಗಡಿಗಳ ಸಂಘ, ಪಾನ್‌ಶಾಪ್‌ಗ್ಳವರ ಸಂಘ, ಸವಿತಾ ಸಮಾಜ, ಓಲಾ, ಉಬರ್ ಅಸೋಸಿಯೇನಷ್, ಮೈಸೂರು ಟೂರ್ ಮತ್ತು ಟ್ರಾವೆಲ್ಸ್ ಅಸೋಷಿಯೇಷನ್,
ಆಟೋ ರೀಕ್ಷಾ ಸಂಘ ಸಂಸ್ಥೆಗಳು, ಬಿಲ್ಡರ್ ಅಸೋಸಿಯೇಷನ್, ಮೈಸೂರು ಛೇಂಬರ್ ಆಫ್ ಕಾಮರ್ಸ್, ಛತ್ರಗಳ ಮುಖ್ಯಸ್ಥರು, ಚರ್ಚ್‌ಗಳ ಮುಖ್ಯಸ್ಥರು, ದೇವಸ್ಥಾನಗಳ ಟ್ರಸ್ಟ್ ಮುಖ್ಯಸ್ಥರು, ಬಾರ್ ಕೌನ್ಸಿಲ್ ಅಸೋಸಿಯೇಷನ್, ಸಣ್ಣ ಕೈಗಾರಿಕೆಗಳ ಸಂಘ, ಹಾಸ್ಟೆಲ್‌ಗಳ ಮುಖ್ಯಸ್ಥರು, ಪತ್ರಿಕಾ ವಿತರಕರ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ಜ್ಯೂವೆಲ್ಲರಿ ಅಸೋಸಿಯೇಷನ್, ಮಾರುಕಟ್ಟೆಗಳ ಸಂಘ ಸಂಸ್ಥೆಗಳು, ನೆರಡ್ಕೊ ಮೊದಲಾದ ಸಂಘ ಸಂಸ್ಥೆಗಳವರು ಬೆಂಬಲ ನೀಡಿದ್ದಾರೆ.
ಜನತಾ ಕರ್ಫ್ಯೂಗೆ ಹಲವು ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ಮಾ.22ರಂದು ಭಾನುವಾರ ಮೈಸೂರಿನಲ್ಲಿ ಬಸ್ ಮತ್ತು ಕ್ಯಾಬ್, ಆಟೋಗಳ ಸಂಚಾರ ಇರುವುದಿಲ್ಲ. ಕೆಎಸ್ಸಾರ್ಟಿಸಿ ಸಂಸ್ಥೆಗೂ ಬಸ್‌ಗಳನ್ನು ರಸ್ತೆಗಿಳಿಸಿದಂತೆ ಮನವಿ ಮಾಡಲಾಗಿದೆ. ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿರುವುದರಿಂದ ಭಾನುವಾರ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕೇಟರಿಂಗ್, ಬೇಕರಿ, ಸ್ವೀಟ್ ಸ್ಟಾಲ್‌ಗಳು ಬಾಗಿಲು ಬಂದ್ ಮಾಡಲಿವೆ.
ಈಗಾಗಲೇ ವ್ಯಾಪಾರ ವಹಿವಾಟು ಕುಸಿತವಾಗಿರುವ ಬಂಡೀಪಾಳ್ಯದ ಎಪಿಎಂಸಿ, ದೇವರಾಜ ಮಾರುಕಟ್ಟೆ, ಡಿ.ದೇವರಾಜ ಅರಸು ರಸ್ತೆ, ನ್ಯೂ ಸಯ್ನಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಕೆ.ಟಿ.ಸ್ಟ್ರೀಟ್ ಮೊದಲಾದ ಕಡೆಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಬಾಗಿಲು ಮುಚ್ಚಲು ಮುಂದಾಗಿರುವುದರಿಂದ ಬಂದ್ ವಾತಾವರಣ ಇರಲಿದೆ.
ಚರ್ಚ್‌ಗಳು ಬಂದ್, ಪ್ರಾರ್ಥನಾ ಸಭೆ ರದ್ದು: ಕೊರೊನಾ ಹರಡುವಿಕೆ ತಡೆಗೆ ಮೈಸೂರು ಧರ್ಮಕ್ಷೇತ್ರದ ವತಿಯಿಂದ ಮಾ.31ರವರೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಬಿಷಪ್ ಡಾ.ಕೆ.ಎ.ವಿಲಿಯಂ, ಚರ್ಚ್‌ಗಳಿಗೆ ಸೂಚಿಸಿದ್ದಾರೆ. ಮಾ.22 ಹಾಗೂ 29ರಂದು ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದಕ್ಕೆ ವಿನಾಯಿತಿ ನೀಡಲಾಗಿದ್ದು, 50ಕ್ಕಿಂತ ಕಡಿಮೆ ಭಕ್ತರು ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು.
ಸಾಮೂಹಿಕ ಪ್ರಾರ್ಥನೆ ನಂತರ ಭಕ್ತರಿಗೆ ನಾಲಗೆಯ ಮೇಲೆ ಇಡುವ ಪ್ರಸಾದವನ್ನು ಕೈಗೆ ಕೊಡಬೇಕು. ಪಾರ್ಥಿವ ಶರೀರದ ಅಂತ್ಯ ಕ್ರಿಯೆ ವೇಳೆ ನಡೆಯುವ ಪ್ರಾರ್ಥನಾ ಸಭೆಗಳಲ್ಲೂ 50ಕ್ಕಿಂತ ಹೆಚ್ಚು ಜನರು ಭಾಗವಹಿಸುವುದು ಬೇಡ. ಹೆಚ್ಚು ಜನ ಸೇರುವುದಾದರೆ ಪ್ರಾರ್ಥನಾ ಸಭೆಗಳನ್ನೇ ರದ್ದು ಮಾಡಿ, ಚರ್ಚ್‌ಗಳಲ್ಲಿ ಪಾಪ ನಿವೇದನೆ ಸದ್ಯಕ್ಕೆ ಬೇಡ ಎಂದು ಅವರು ತಿಳಿಸಿದ್ದಾರೆ.