ಬೀದರ: ಕಾಲುಗಳೆರಡು ಸ್ವಾಧೀನ ಕಳೆದುಕೊಂಡರೆ ಏನಂತೆ, ದುಡಿದು ತಿನ್ನಲು ಕೈಗಳು ಸಾಕು ಎಂದು ನಂಬಿರುವ ವಿಕಲಚೇತನ ವ್ಯಕ್ತಿಯೊಬ್ಬರು ಹೊಟೇಲ್ ಉದ್ಯಮದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅಂಗವೈಕಲ್ಯ ಶಾಪ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಪರಿಶ್ರಮಪಟ್ಟು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.
ಬೀದರ ತಾಲೂಕಿನ ಬಗದಲ್ ಗ್ರಾಮದ ನಿವಾಸಿ ಶ್ರೀಕಾಂತ ಪೊಶೆಟ್ಟಿ ಎಂಬುವರೇ ಅಂಗವೈಕಲ್ಯತೆಯನ್ನೇ ಮೆಟ್ಟಿ ನಿಂತವರು. ದೈಹಿಕವಾಗಿ ಅಂಗವಿಕಲರಾದರೂ ಇವರು ಜೀವನ ದಲ್ಲಿ ಎದೆಗುಂದಲಿಲ್ಲ. ಹೊಟೇಲ್ ನಲ್ಲಿ ಉಪಾಹಾರ ಮತ್ತು ಚಹಾ ಮಾರುತ್ತ, ಬರುವ ಆದಾಯದಲ್ಲೇ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ಕೈಕಾಲುಗಳಿದ್ದು ಸೋಮಾರಿ ಗಳಾದವರಿಗೆ ಮಾದರಿಯಾಗಿ ನಿಂತಿದ್ದಾರೆ.
ಶ್ರೀಕಾಂತ ಹುಟ್ಟು ಅಂಗವಿಕಲರಾಗಿದ್ದು, 2 ಕಾಲುಗಳಲ್ಲಿ ಸಂಪೂರ್ಣ ಸ್ವಾಧೀನವೇ ಇಲ್ಲ. ಹೆತ್ತವರ ಆರೈಕೆಯಲ್ಲಿ ಬೆಳೆದ ಅವರು ಮದುವೆ ಬಳಿಕ ಜವಾಬ್ದಾರಿಯೂ ಹೆಗಲೇರಿತು. ಆಗ ಮನೆಯಲ್ಲೇ ಪತಂಗ, ಹಗ್ಗ ತಯಾರಿಸಿ ಗಳಿಸುತ್ತಿದ್ದ ಹಣ ಯಾವುದಕ್ಕೂ ಸಾಲದಂತಾಯಿತು. ನಂತರ ತಮಗೆ ಕಾಲುಗಳು ಇಲ್ಲದಿದ್ದರೇನಂತೆ ಕೈಯಿಂದಲೇ ಹೊಟೇಲ್ ನಡೆಸಬಹುದು ಎಂದು ಗಟ್ಟಿ ನಿಧಾರ ಮಾಡಿ, ಈಗ ಕಳೆದ 15 ವರ್ಷಗಳಿಂದ ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾನೆ.
ಹೋಬಳಿ ಕೇಂದ್ರವಾಗಿರುವ ಬಗದಲ್‌ನಲ್ಲಿ ಸಣ್ಣದೊಂದು ಅಂಗಡಿ ಹಾಕಿ ಚಹಾ ಮಾರಲು ಆರಂಭಿಸಿದ ಶ್ರೀಕಾಂತ ನಂತರ ಉಪಾಹಾರ ಸಹ ಸಿದ್ಧಪಡಿಸಲು ಶುರು ಮಾಡಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಾಯದಿಂದ ಸಣ್ಣದಾಗಿದ್ದ ಹೊಟೇಲ್ ನ್ನು ಸುಧಾರಣೆ ಮಾಡಿಕೊಂಡಿದ್ದಾರೆ. ದಿನಕ್ಕೆ 800ರಿಂದ 1000 ರೂ. ವರೆಗೆ ಗಳಿಸುವ ಶ್ರೀಕಾಂತ ಎಲ್ಲ ಖರ್ಚು ವೆಚ್ಚ ಕಳೆದು 300ರಿಂದ 400 ರೂ. ಆದಾಯ ಪಡೆಯುತ್ತಿದ್ದಾರೆ.
ಪತ್ನಿ ಮತ್ತು 6 ಜನ ಮಕ್ಕಳಿರುವ ಅವರ ಕುಟುಂಬ ನಿರ್ವಹಣೆಗೆ ಇದುವೇ ಆಧಾರ. ಹಲವು ವರ್ಷಗಳಿಂದ ಯಾರಿಗೂ ಹೊರೆಯಾಗದೆ ತಮ್ಮ ಜೀವನವನ್ನು ತಾವೆ ರೂಪಿಸಿಕೊಂಡು ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ನಿತ್ಯವೂ ಯಾರೊಬ್ಬರ ಸಹಾಯವಿಲ್ಲದೆ ತಮ್ಮ ಹೊಟೇಲ್ ಸಾಮಗ್ರಿಗಳನ್ನು ತಾವೇ ತಂದು ವಿವಿಧ ತಿಂಡಿ ಹಾಗೂ ಚಹಾ ತಯಾರಿಸಿ ಸ್ವತಃ ಅವರೇ ಎಲ್ಲ ಗ್ರಾಹಕರಿಗೆ ಕೊಡುತ್ತಾರೆ. ಶ್ರೀಕಾಂತನ ಪತ್ನಿ ನಿತ್ಯ ಹೊಟೇಲ್‌ನಲ್ಲಿ ಪತಿ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಇನ್ನೂ ತನಗೆ ಓದಲು ಸಾಧ್ಯವಾಗಲಿಲ್ಲ. ನನ್ನಂಥ ಸ್ಥಿತಿ ಮಕ್ಕಳಿಗೆ ಬರಬಾರದೆಂದು 5 ಜನ ಹೆಣ್ಣು ಮತ್ತು ಒಬ್ಬ ಗಂಡು ಮಗನಿಗೆ ಶಿಕ್ಷಣ ಕೊಡಿಸುತ್ತಿದ್ದಾನೆ.
ಆತನ ಚೈತನ್ಯದ ಕೆಲಸ, ಸ್ವಾವಲಂಬಿ ಜೀವನದಿಂದ ಸುತ್ತಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಂಗವಿಕಲ ವೇತನ ಹೊರತುಪಡಿಸಿದರೆ ಬೇರ್ಯಾವ ಸರ್ಕಾರದ ಸೌಲತ್ತುಗಳು ಆತನಿಗೆ ಸಿಕ್ಕಿಲ್ಲ. ವಾಸಿಸುವ ಮನೆ ಸ್ವತಂತ್ತಾದರೂ ಅತಿ ಹಳೆಯದು, ಚಿಕ್ಕದು. ಕುಟುಂಬ ಸಾಗಿಸಲು ನನ್ನ ಸಣ್ಣ ಉದ್ಯಮವನ್ನು ಬೆಳೆಸಬೇಕೆಂಬ ಆಸೆ ಇದೆ. ಆದರೆ, ಇದಕ್ಕೆ ಬ್ಯಾಂಕ್‌ನಿಂದ ಸಹಾಯ ಧನ ಅವಶ್ಯಕತೆ ಇದೆ. ಜತೆಗೆ ಆಶ್ರಯ ಮನೆ ಕಲ್ಪಿಸಿಕೊಡಬೇಕು. ಇದರಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಶ್ರೀಕಾಂತ.
ಅಂಗವೈಕಲ್ಯತೆ ಬಗ್ಗೆ ಮರುಗದೇ ದುಡಿದು ತಿನ್ನುತ್ತಿರುವ ಶ್ರೀಕಾಂತ ಪ್ರತಿಯೊಬ್ಬರಿಗೂ ಮಾದರಿ. ಆತನ ಮನೋಭಾವ ಪ್ರತಿಯೊಬ್ಬರಲ್ಲಿ ಮೂಡಬೇಕಿದೆ.
ಬೇರೊಬ್ಬರ ಮೇಲೆ ಅವಲಂಬಿತರಾಗದೇ ಸ್ವ ಉದ್ಯೋಗ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕು ಸಾಗಿಸುತ್ತಿದ್ದೇನೆ. ನನ್ನ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಗಳಿಸುತ್ತಿದ್ದೇನೆ. ಹೆಚ್ಚಿನ ದುರಾಸೆ ನನಗಿಲ್ಲ. ಕಾಲುಗಳು ಇಲ್ಲದ ಕಾರಣ ಕೆಲವೊಮ್ಮೆ ಹೊಟೇಲ್‌ನಲ್ಲಿ ಗ್ರಾಹಕರೇ ನನ್ನ ಕೆಲಸಕ್ಕೆ ಸಹಕರಿಸುತ್ತಾರೆ. ನಮ್ಮಂಥ ವಿಕಲಚೇತನರಿಗೆ ಸರ್ಕಾರದ ಅಗತ್ಯ ಸೌಲತ್ತು ಸಿಗಬೇಕು. ಆಗ ಮಾತ್ರ ನಮ್ಮಂಥ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ.
–ಶ್ರೀಕಾಂತ ಪೊಶೆಟ್ಟಿ, ಅಂಗವಿಕಲ
–ಶಶಿಕಾಂತ ಬಂಬುಳಗೆ