Advertisement
ಪ್ರಸಕ್ತ ಸಾಲಿನಲ್ಲಿ ಕಾಫಿ ಬೆಳೆಯ ಇಳುವರಿಯಲ್ಲಾದ ಗಣನೀಯ ಕುಸಿತದಿಂದಾಗಿ ಬೆಳೆಗಾರರು ಕಂಗೆಟ್ಟಿದ್ದಾರೆ. ವಾತಾವರಣದ ಅಸಮತೋಲನದಿಂದಾಗಿ ಇಳುವರಿ ಕುಸಿತವಾಗಿದೆ. ಜಾಗತಿಕವಾಗಿ ಬೆಳೆ ಹೆಚ್ಚಿದ್ದು ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಹತ್ತಿಕ್ಕುವ ಪ್ರವೃತ್ತಿ ಮುಂದುವರಿದಿದೆ. 2017-18ರಲ್ಲಂತೂ ಬೆಲೆ ಕುಸಿತ ದಾಖಲೆಯ ಪ್ರಮಾಣದಲ್ಲಾಗಿದೆ. ಕಾಫಿ ಬೆಲೆ ಬೆಳೆಗೆ ತಗಲುವ ವೆಚ್ಚಕ್ಕಿಂತಲೂ ಕಡಿಮೆಯಾಗಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದು ಸಾಲ ಮರು ಪಾವತಿಗೆ ಹೆಣಗಾಡುತ್ತಿದ್ದಾರೆ. ಬೆಳೆಗಾರರ ಹಿತಾ ಸಕ್ತಿ ದೃಷ್ಟಿಯಿಂದ ಇದು ಅಪಾಯಕಾರಿ ಎಂದು ಶೋಭಾ ಕಳವಳ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ಮಂಗಳವಾರ ನಿಯಮ 377ರಡಿಯಲ್ಲಿ ಕಾಫಿ ಬೆಳೆಗಾರರ ಸಂಕಷ್ಟ ಗಳ ಕುರಿತು ಮಾತನಾಡಿದ ಶೋಭಾ, ಕಾಫಿ ಬೆಳೆಗಾರರ ಹಿತಾಸಕ್ತಿ ರಕ್ಷಣೆಗೆ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಕಾಫಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸ ಬೇಕು ಅಥವಾ ಬೆಲೆ ಪರಿಹಾರ ಯೋಜನೆಯನ್ನು ಜಾರಿಗೆ ತರುವಂತೆ ಸಂಸದೆ ಒತ್ತಾಯಿಸಿದರು. ಈ ರೀತಿಯ ಕ್ರಮಗಳಿಂದ ಮಾತ್ರ ಕಾಫಿ ಬೆಳೆಗಾರರನ್ನು ರಕ್ಷಿಸಲು ಸಾಧ್ಯ ಎಂದು ತಿಳಿಸಿದರು. ಕೇಂದ್ರ ಸರಕಾರ ಕಾಫಿ ಬೆಳೆಗಾರರ ಸಾಲಗಳ ಮೇಲಿನ ಕನಿಷ್ಠ ಒಂದು ವರ್ಷದ ಬಡ್ಡಿಯನ್ನು ಮನ್ನಾ ಮಾಡುವಂತೆ ಹಾಗೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಫಿ ಬೆಳೆಗಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವಂತೆ ಶೋಭಾ ಆಗ್ರಹಿಸಿದರು.