ಜೇವರ್ಗಿ: ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ವೀರಶೈವ ಸಮಾಜದ ತಾಲೂಕು ಘಟಕ ಬೆಂಬಲ ಸೂಚಿಸಿ, ಹೋರಾಟದಲ್ಲಿ ಪಾಲ್ಗೊಂಡಿದೆ.
ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸಿದ್ಧು ಸಾಹು ಅಂಗಡಿ ನೇತೃತ್ವದಲ್ಲಿ ಹತ್ತಾರು ಸಮಾಜದ ಮುಖಂಡರು ನ್ಯಾಯವಾದಿ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಬೇಡ ಜಂಗಮರಿಗೆ ಸಂವಿಧಾನಬದ್ಧವಾಗಿ ದೊರೆಯ ಬೇಕಾದ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ನೀಡಬೇಕು. ಅವರು ಬೇಡ ಜಂಗಮರು ಎನ್ನಲು ಹಲವಾರು ದಾಖಲೆಗಳು ಸರ್ಕಾರದ ಮುಂದಿವೆ. ಬೇಡ ಜಂಗಮರು ಯಾರ ಹಕ್ಕನ್ನು ಕಿತ್ತುಕೊಳ್ಳುತ್ತಿಲ್ಲ. ಅವರಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವ ಸ್ಥಿತಿ ಬಂದಿದೆ. ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಪ್ರಮಾಣ ಪತ್ರ ಸಿಗುವ ವರೆಗೂ ನಡೆಯುವ ಈ ಹೋರಾಟದಲ್ಲಿ ಸಮಾಜದ ತಾಲೂಕಿನ ನೂರಾರು ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಲಿದ್ದಾರೆ ಎಂದರು.
ವೀರಶೈವ ಸಮಾಜದ ತಾಲೂಕು ಗೌರವಾಧ್ಯಕ್ಷ ಗುರುಲಿಂಗಯ್ಯಸ್ವಾಮಿ ಯನಗುಂಟಿ, ಉಪಾಧ್ಯಕ್ಷ ಭಗವಂತ್ರಾಯ ಶಿವಣ್ಣವರ್, ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ಬಿ.ಸಿ.ಗದ್ದಗಿಮಠ ಕೋಳಕೂರ, ವಿಶ್ವ ಪಾಟೀಲ ರಾಸಣಗಿ, ಪಂಚಯ್ಯಸ್ವಾಮಿ ಗುಡೂರ ಹಾಗೂ ಇನ್ನಿತರರು ಇದ್ದರು.