ಎಚ್.ಡಿ.ಕೋಟೆ: ಎಲ್ಲರ ಬದುಕು ಹಸನಾಗಬೇಕು ಎಂಬ ಸಿದ್ಧಾಂತ ಮತ್ತು ಧ್ಯೇಯವನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಪಕ್ಷ ಹೊಂದಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಜೆ.ಕೆ.ಗೋಪಾಲ್ ಪೂಜಾರ್ ಗೆಲ್ಲಿಸಿ ಎಂದು ಆರ್‌ಪಿಐ ರಾಷ್ಟ್ರಾಧ್ಯಕ್ಷ ವೈ.ಪ್ರಕಾಶ್ ಅಂಬೇಡ್ಕರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗದ ಆವರಣದಲ್ಲಿ ನಡೆದ ಆರ್‌ಪಿಐ ಪಕ್ಷದ ಬಹಿರಂಗ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ ಬಂದು 70 ವರ್ಷ ಕಳೆದರೂ ದೇಶದ ಆದಿವಾಸಿಗಳ ಬದುಕು ಸಕಾರಗೊಂಡಿಲ್ಲ. ಲಕ್ಷಾಂತರ ಆದಿವಾಸಿಗಳು ಮೂಲ ಸಮಸ್ಯೆಗಳಿಂದ ಪರಿತಪಿಸುತ್ತಿದ್ದು, ಬಂದ ಸರ್ಕಾರಗಳು ನೆಪ ಮಾತ್ರಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಿಸಿ, ಬಳಸದೇ ಕಣ್ಮುಚ್ಚಿ ಕುಳಿತಿವೆ ಎಂದು ದೂರಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೀಸಲಾತಿ ಕಲ್ಪಿಸಿದ್ದರಿಂದ ಇಂತಹ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದಿವಾಸಿ ಸಮುದಾಯಕ್ಕೆ ನಾಯಕತ್ವ ಅವಶ್ಯಕವಾಗಿದೆ. ಆದಿವಾಸಿ ಮುಖಂಡರೇ ವಿಧಾನಸಭೆ ಪ್ರವೇಶಿಸಿ ಸರ್ಕಾರಕ್ಕೆ ಆದಿವಾಸಿಗಳ ಕೂಗು ಸರ್ಕಾರಕ್ಕೆ ಕೇಳಿಸಿದಾಗ ಮಾತ್ರ ಸಮುದಾಯ ಉದ್ಧಾರ ಸಾಧ್ಯ. ಹೀಗಾಗಿ ಮುಂಬರುವ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಜೇನು ಕುರುಬರ ಗೋಪಾಲ್ ಪೂಜಾರ್ ಅವರನ್ನು ಬೆಂಬಲಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್‌ಪಿಐ ರಾಜಾಧ್ಯಕ್ಷ ಮೋಹನ್‌ರಾಜ್, ಕಾರ್ಯದರ್ಶಿ ಬಸವರಾಜ್, ಆದಿವಾಸಿ ಮುಖಂಡ ವಿಠಲ್ ನಾಣಿ ಮಾತನಾಡಿದರು. ಅದಿವಾಸಿ ಮುಖಂಡರಾದ ಬಿಳಿಗಿರಿರಂಗನ ಬೆಟ್ಟದ ಜಡೆಸ್ವಾಮಿ, ನಾಗಸುಂದರ್, ಚಾ.ಶಿವಕುಮಾರ್, ಚಾ.ಶಿವಕುಮಾರ್, ಸೋಮಣ್ಣ, ಪುರುಷೋತ್ತಮ್, ಸಣ್ಣಕುಮಾರ್, ರಾಜಣ್ಣ, ಜಿ.ಸ್ವಾಮಿ, ಬಿ.ಎನ್.ಭಾಸ್ಕರ್, ಕೆಂಚಯ್ಯ, ಮಹದೇವ್, ದೇವರಾಜ್, ಸೋಮಣ್ಣ, ಬಸಪ್ಪ, ನಟರಾಜ್, ಸೋಮವ್ವ, ಪಾರ್ವತಮ್ಮ, ಆರ್‌ಪಿಐ ಮುಖಂಡರು ಇದ್ದರು.