Advertisement

ಶಾಲಾರಂಭಕ್ಕೂ ಮುನ್ನವೇ ಪಠ್ಯ ಸರಬರಾಜು

06:43 PM Sep 23, 2021 | Team Udayavani |

ರಾಯಚೂರು: ಸರ್ಕಾರ ಇನ್ನೂ ಒಂದರಿಂದ ಐದನೇ ತರಗತಿಗಳನ್ನು ಆರಂಭಿಸಿಲ್ಲ. ಆದರೆ, ಅಷ್ಟರೊಳಗೆ ಪಠ್ಯ-ಪುಸ್ತಕ ಸರಬರಾಜು ಮಾಡುತ್ತಿದ್ದು, ಈಗಾಗಲೇ ಜಿಲ್ಲೆಗೆ ಬೇಡಿಕೆಯ ಶೇ.61.39ರಷ್ಟು ಪಠ್ಯ-ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಕೋವಿಡ್‌-19 ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಶೈಕ್ಷಣಿಕ ವ್ಯವಸ್ಥೆ ತಾಳ ಮೇಳ ತಪ್ಪಿ ಹೋದಂತಾಗಿತ್ತು.

Advertisement

ಆದರೆ, ಪಠ್ಯ-ಪುಸ್ತಕದ ವಿಚಾರದಲ್ಲಿ ಮಾತ್ರ ಸರ್ಕಾರ ಹಿಂದಡಿ ಇಟ್ಟಿರಲಿಲ್ಲ. ಮೊದಲನೇ ಲಾಕ್‌ಡೌನ್‌ ವೇಳೆ ಮಕ್ಕಳು ಶಾಲೆಗೆ ಬಾರದಿದ್ದರೂ ಅವರ ಮನೆಗೆ ಪಠ್ಯಪುಸ್ತಕ ಸರಬರಾಜು ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಾರಿಯೂ ಶಾಲೆಗಳ ಪರಿಸ್ಥಿತಿ ಏನು ಎಂಬ ಜಿಜ್ಞಾಸೆಯಲ್ಲಿಯೇ ಪಾಲಕರು ಕಾಲ ಕಳೆಯುತ್ತಿರುವಾಗ ಸರ್ಕಾರ ಶಾಲೆಗಳ ಪುನಾರಂಭಕ್ಕೆ ಮುಂದಾಗಿದೆ. ಈಗಾಗಲೇ ಆರನೇ ತರಗತಿಯಿಂದ ಶಾಲಾ-ಕಾಲೇಜುಗಳು ಶುರುವಾಗಿದೆ.

ದಸರಾ ರಜೆ ಬಳಿಕ ಒಂದನೇ ತರಗತಿಯಿಂದ ಶಾಲೆಗಳನ್ನು ಆರಂಭಿಸುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದು, ಅದರ ಭಾಗವಾಗಿ ಈಗಾಗಲೇ ಪುಸ್ತಕಗಳ ಪೂರೈಕೆ ಪ್ರಕ್ರಿಯೆಯೂ ಜೋರಾಗಿಯೇ ನಡೆಯುತ್ತಿದೆ. ಸರ್ಕಾರದಿಂದ ಉಚಿತವಾಗಿ ಪಠ್ಯ-ಪುಸ್ತಕಗಳನ್ನು ವಿತರಿಸುತ್ತಿದ್ದು, ಖಾಸಗಿ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಠ್ಯ-ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಒಂದರಿಂದ ಹತ್ತನೇ ತರಗತಿವರೆಗೆ ವಿಷಯವಾರು ಸರ್ಕಾರಿ ಶಾಲೆಗಳಿಗೆ ಉಚಿತ ವಿತರಣೆಗಾಗಿ 31,72,851 ಹಾಗೂ ಖಾಸಗಿ ಶಾಲೆಗಳ ಖರೀದಿಗಾಗಿ 2,98,332 ಪಠ್ಯ-ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಈವರೆಗೂ ಜಿಲ್ಲೆಗೆ ಉಚಿತ ವಿತರಣೆಗಾಗಿ 19,47,931 ಹಾಗೂ ಖಾಸಗಿ ಶಾಲೆಗಳ ಖರೀದಿಗಾಗಿ 1,90,040 ಪಠ್ಯ-ಪುಸ್ತಕಗಳನ್ನು ಕೇಂದ್ರ ಕಚೇರಿಯಿಂದ ಸರಬರಾಜು ಮಾಡಲಾಗಿದೆ.

ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಕ ಶಾಲೆಗಳಿಗೆ ರವಾನೆ ಕೂಡ ಮಾಡಲಾಗುತ್ತಿದೆ. ಇನ್ನೂ ಕೆಲವೊಂದು ಪುಸ್ತಕಗಳು ಬರುವುದು ಬಾಕಿಯಿದ್ದು, ಈ ತಿಂಗಳ ಕೊನೆ ವೇಳೆಗೆ ಪೂರೈಸುವ ಸಾಧ್ಯತೆಗಳಿವೆ.

Advertisement

ಕಾನ್ವೆಂಟ್‌ ಶಾಲೆಗಳು ಆರಂಭ
ಒಂದೆಡೆ ಸರ್ಕಾರ ದಸರಾ ಬಳಿಕವೇ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳ ಶಾಲೆ ಆರಂಭಿಸಲಾಗುವುದು ಎಂದು ತಿಳಿಸಿದೆ. ಆದರೆ, ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆಗಲೇ ಎಕ್‌ಕೆಜಿ, ಯುಕೆಜಿಯಿಂದ ಹಿಡಿದು 10ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಮೂಲಕ ಸರ್ಕಾರದ ಆದೇಶವನ್ನೇ ಕಡೆಗಣಿಸಿವೆ.

ನಿತ್ಯ ಕಾನ್ವೆಂಟ್‌ಗೆ ವ್ಯಾನ್‌, ಆಟೋಗಳಲ್ಲಿ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಪ್ರಶ್ನಿಸುತ್ತಿಲ್ಲ. ಈಗ ಸರ್ಕಾರ ಹೇಗಿದ್ದರೂ ಪಠ್ಯ ಪುಸ್ತಕ ಪೂರೈಸಿರುವುದು ಮಕ್ಕಳ ಕಲಿಕೆಗೆ ಅನುಕೂಲವೇ ಆಗಿದೆ. ಕೊರೊನಾ ಹೇಗಿದ್ದರೂ ಕಡಿಮೆಯಾಗಿದೆ. ಅಲ್ಲದೇ, ಸರ್ಕಾರವೆ ದಸರಾ ಬಳಿಕ ಶಾಲೆ ಆರಂಭಿಸುವುದಾಗಿ ತಿಳಿಸಿದ್ದರಿಂದ ಒಂದರಿಂದ ಶಾಲೆ ಆರಂಭಿಸಿದ್ದಾಗಿ ಸಮಜಾಯಿಷಿ ನೀಡುತ್ತಾರೆ ಖಾಸಗಿ ಕಾಲೇಜಿನ ಆಡಳಿತ ಮಂಡಳಿಗಳು. ಆದರೆ, ಸರ್ಕಾರಿ ಶಾಲೆಗಳಲ್ಲಿ ಮಾತ್ರ ಮಕ್ಕಳು ಶಾಲೆಗೆ ಬಂದು ಹೋಮ್‌ ವರ್ಕ್‌ ಬರೆಯಿಸಿಕೊಂಡು ಹೋಗುತ್ತಿದ್ದಾರೆ.

ಈಗಾಗಲೇ ಶೇ.61ರಷ್ಟು ಪಠ್ಯಪುಸ್ತಕ ಪೂರೈಕೆಯಾಗಿದೆ. ಉಳಿದ ಪುಸ್ತಕಗಳು ಕೂಡ ಶೀಘ್ರದಲ್ಲೇ ಬರಲಿದೆ. ಆಯಾ ಬಿಇಒ ಕಚೇರಿಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ನಮಗೆ ಅಗತ್ಯವಿರುವಷ್ಟು ಪುಸ್ತಕ ಬಂದಿದ್ದು, ಯಾವುದೇ ಕೊರತೆ ಆಗಿಲ್ಲ.
ವೃಷಭೇಂದ್ರಯ್ಯ ಸ್ವಾಮಿ,
ಡಿಡಿಪಿಐ, ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next